ಸಮಗ್ರ ನ್ಯೂಸ್: ಸುಮಾರು 500 ಕೋಟಿ ರೂ.ಗಳಲ್ಲಿ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ರಬ್ಬರ್ ಟಯರ್ ತಯಾರಿಕಾ ಕಾರ್ಖಾನೆಯ ಪ್ರಸ್ತಾವನೆಗೆ ಬರೋಬ್ಬರಿ ಒಂದು ದಶಕದ ಸಂಭ್ರಮ! ಸುಳ್ಯದ ಮಣ್ಣಿನ ಮಗ ಡಿ.ವಿ ಸದಾನಂದ ಗೌಡರು 2012ರಲ್ಲಿ ಮುಖ್ಯಮಂತ್ರಿಯಾಗಿ ತನ್ನ ತವರೂರಿಗೆ ಭೇಟಿ ನೀಡಿದ್ದ ವೇಳೆ ನೀಡಿದ ಹೇಳಿಕೆ ಕೇವಲ ಹೇಳಿಕೆಯಾಗಿಯೇ ಉಳಿದಿದೆ.
ಅಂದು ಸದಾನಂದ ಗೌಡರು ನೀಡಿದ್ದ ಹೇಳಿಕೆ ಸುಳ್ಯ ತಾಲೂಕಿನ ಯುವಜನತೆಗೆ ಬಾರೀ ನಿರೀಕ್ಷೆ ಹುಟ್ಟು ಹಾಕಿತ್ತು. ಹಲವು ಮಂದಿಗೆ ಉದ್ಯೋಗ ನೀಡುವುದರ ಜೊತೆಗೆ ಸುಳ್ಯ ತಾಲೂಕಿನ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸುವ ಕುರಿತಂತೆ ಸುಳ್ಯದ ಜನತೆಯ ನಿರೀಕ್ಷೆ ಗರಿಗೆದರಿತ್ತು.
ಆದರೆ ಎಷ್ಟು ತಕ್ಷಣ ಹೇಳಿಕೆ ನೀಡಿದ್ದರೋ ಅಷ್ಟೇ ಬೇಗ ಆ ಪ್ರಸ್ತಾವನೆಯನ್ನು ಡಿವಿ ಎಸ್ ಮರೆತುಬಿಟ್ಟಿದ್ದರು. ಸುಳ್ಯದ ಘನತೆವೆತ್ತ ರಾಜಕಾರಣಿಗಳೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಿಲ್ಲ. ಇದರ ಫಲವಾಗಿ ಡಿವಿಎಸ್ ಬಳಿಕ ಅಧಿಕಾರಕ್ಕೆ ಬಂದ ಎಲ್ಲಾ ಮುಖ್ಯಮಂತ್ರಿಗಳು, ಮಂತ್ರಿ ಮಹೋದಯರು ಈ ಕಾರ್ಖಾನೆ ನಿರ್ಮಾಣದ ಕುರಿತು ಚಿಂತಿಸಲೇ ಇಲ್ಲ. ಪರಿಣಾಮವಾಗಿ ಇಂದಿಗೂ ರಬ್ಬರ್ ಟಯರ್ ತಯಾರಿಕಾ ಘಟಕ ಹೇಳಿಕೆಗಷ್ಟೇ ಸೀಮಿತವಾಗಿದೆ.
ಪರಿಸರ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಇನ್ನಿತರ ದಾಖಲಾತಿಗಳ ಕುರಿತಂತೆ ಡಿವಿಎಸ್ ಅಂದಿನ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿಕೆ ನೀಡಿದ್ದು, ಆಗಿನ ಜಿಲ್ಲಾಧಿಕಾರಿ ಎನ್.ಎಸ್. ಚನ್ನಪ್ಪಗೌಡರಿಗೂ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಘಟಕ ನಿರ್ಮಾಣಕ್ಕೆ 100 ಎಕರೆ ಜಾಗದ ಅಗತ್ಯತೆಯ ಕುರಿತಂತೆಯೂ ಚರ್ಚಿಸಲಾಗಿತ್ತು. ಇಷ್ಟೆಲ್ಲಾ ದೂರದೃಷ್ಟಿ ಆಲೋಚಿಸಿ ಪ್ರಸ್ತಾಪ ಮಾಡಿದ್ದ ಮಹತ್ತರ ಯೋಜನೆಯೊಂದು ಪ್ರಸ್ತಾವನೆಯೊಂದಿಗೆ ಹಳ್ಳ ಹಿಡಿದದ್ದು ಸುಳ್ಯದ ಪಾಲಿಗೆ ದುರದೃಷ್ಟಕರ.