ಸಮಗ್ರ ನ್ಯೂಸ್: ಶನಿವಾರ ಮುಂಜಾನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಿಂತಿದ್ದ ಬಸ್‌ಗೆ ವೇಗವಾಗಿ ಬಂದ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ನೇಪಾಳಿ ಪ್ರಯಾಣಿಕರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ.
ಪೊಲೀಸ್ ವರದಿ ಪ್ರಕಾರ, 60 ನೇಪಾಳದ ವಲಸೆ ಕಾರ್ಮಿಕರನ್ನು ಹೊತ್ತ ಸ್ಲೀಪರ್ ಬಸ್ ಗೋವಾಕ್ಕೆ ತೆರಳುತ್ತಿದ್ದಾಗ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾಂಗುಪುರ ಗ್ರಾಮದಲ್ಲಿ ಅದರ ಒಂದು ಟೈರ್ ಪಂಕ್ಚರ್ ಆಗಿದೆ. ಬಸ್ಸಿನ ಚಾಲಕ ವಾಹನವನ್ನು ರಸ್ತೆಬದಿಯಲ್ಲಿ ನಿಲ್ಲಿಸಿ ಟೈರ್ ಬದಲಾಯಿಸುವ ವೇಳೆ ವೇಗವಾಗಿ ಬಂದ ಟ್ರಕ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
60 ಪ್ರಯಾಣಿಕರಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ನಾಲ್ವರನ್ನು ಪ್ರೇಮ್ ತಾರು, ಶೀತಲ್ ತಾರು, ಚಕ್ರ ಬಹದ್ದೂರ್ ಎಂದು ಗುರುತಿಸಲಾಗಿದ್ದು, ಒಬ್ಬರ ಗುರುತು ಪತ್ತೆಯಾಗಿಲ್ಲ ಎಂದು ಬಾರಾಬಂಕಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪೂರ್ಣೇಂದು ಸಿಂಗ್ ಹೇಳಿದ್ದಾರೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಾರಾಬಂಕಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆರು ಗಾಯಾಳುಗಳನ್ನು ಲಕ್ನೋದ ಕೆಜಿಎಂಯು ಟ್ರಾಮಾ ಸೆಂಟರ್‌ಗೆ ಕಳುಹಿಸಿದ್ದಾರೆ.
ಉಳಿದ ಪ್ರಯಾಣಿಕರು ಸುರಕ್ಷಿತವಾಗಿದ್ದು, ಅವರನ್ನು ನೇಪಾಳಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.
ಮೃತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.