ಕೊಲಂಬೋ: ಜುಲೈನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಾಗರಿಕರು ನಡೆಸಿದ ಭಾರೀ ಪ್ರತಿಭಟನೆ ಹಿನ್ನೆಲೆ ಶ್ರೀಲಂಕಾದಿಂದ ಪಲಾಯನಗೈದಿದ್ದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಶನಿವಾರ ಮುಂಜಾನೆ ತಾಯ್ನಾಡಿಗೆ ಮರಳಿದ್ದಾರೆ.
ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಜನರು ಹಿಂಸಾತ್ಮಕ ಪ್ರತಿಭಟನೆ ನಡೆಸಿ, ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದರು. ಜುಲೈ 9 ರಂದು ಪ್ರತಿಭಟನಾಕಾರರು ರಾಜಪಕ್ಸೆ ಅವರ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಶ್ರೀಲಂಕಾದಿಂದ ಪಲಾಯನಗೈದಿದ್ದ ರಾಜಪಕ್ಸೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು.
ಶ್ರೀಲಂಕಾ ತೊರೆದಿದ್ದ ರಾಜಪಕ್ಸೆಗೆ ಸಿಂಗಾಪುರದಲ್ಲಿ 14 ದಿನಗಳ ಭೇಟಿಯ ಪಾಸ್ ನೀಡಲಾಗಿತ್ತು. ಅವರು ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ಹೋಗಿ, ಬಳಿಕ ಥೈಲ್ಯಾಂಡ್‌ಗೆ ತೆರಳಿದ್ದರು. ಈ ಎಲ್ಲಾ ಘಟನೆಗಳು ನಡೆದು ಇದೀಗ 2 ತಿಂಗಳ ಬಳಿಕ ರಾಜಪಕ್ಸೆ ಶ್ರೀಲಂಕಾಗೆ ಮರಳಿದ್ದಾರೆ.
ಗೊಟಬಯ ರಾಜಪಕ್ಸೆ ರಾಜೀನಾಮೆ ನೀಡಿದ ಬಳಿಕ ಜುಲೈ 21 ರಂದು ಸಂಸತ್ತಿನಲ್ಲಿ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕರಿಸಿದರು. ಕೊಲಂಬೋದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದು ರಾಜಪಕ್ಸೆ ದೇಶ ತೊರೆಯುವ ವೇಳೆ ವಿಕ್ರಮಸಿಂಘೆ ಅವರು ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
1948ರಲ್ಲಿ ಶ್ರೀಲಂಕಾಗೆ ಸ್ವಾತಂತ್ರ್ಯ ಲಭಿಸಿದ ಬಳಿಕ ಇದೇ ಮೊದಲ ಬಾರಿಗೆ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪ್ರವಾಸೋದ್ಯಮವೇ ಉಸಿರಾಗಿರುವ ಶ್ರೀಲಂಕಾದಲ್ಲಿ ಕೋವಿಡ್ ಕಾರಣದಿಂದಾಗಿ ಆರ್ಥಿಕತೆಗೆ ಭಾರೀ ಹೊಡೆತ ಬಿತ್ತು.