ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯದೆಲ್ಲೆಡೆ ಶಕ್ತಿ ಪ್ರದರ್ಶನ ನೀಡುವ ಮೂಲಕ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಈಗಿಂದಲೇ ಕಾರ್ಯೋನ್ಮುಖರಾಗಿ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ.
ಸಮಾವೇಶದ ಬಳಿಕ ಹೆಲಿಪ್ಯಾಡ್ ಬಳಿ ಪಕ್ಷದ ಕೋರ್ಕಮಿಟಿ ಸದಸ್ಯರ ಜತೆಗೆ ಸುಮಾರು 45 ನಿಮಿಷ ಚರ್ಚೆ ನಡೆಸಿದ ಅವರು, ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ಬೆಳವಣಿಗೆಗಳು, ಪಕ್ಷದಿಂದ ನಡೆಯುತ್ತಿರುವ ಸಂಘಟನಾತ್ಮಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಮಂಗಳೂರಿನ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ ಹಾಗೂ ಬಿಜೆಪಿ ಕಾರ್ಯಕರ್ತರ ಉತ್ಸಾಹದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ನಿರಂತರವಾಗಿ ಭೇಟಿ ನೀಡುತ್ತೇನೆ. ಆದರೆ ನೀವು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು, ಎಂದು ಮೋದಿ ಭರವಸೆ ನೀಡಿದರು.
ಕೇಂದ್ರ, ರಾಜ್ಯ ಸರಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ಮೋದಿ ವಿವರ ಪಡೆದರು. ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಜಿಲ್ಲಾ ಮತ್ತು ವಿಭಾಗವಾರು ಸಮಾವೇಶ ಆಯೋಜಿಸಬೇಕು. ಸರಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸಲು ಸೂಕ್ತ ಕಾರ್ಯ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
ಗುಜರಾತ್ ಚುನಾವಣೆ ಬಳಿಕ ನಮ್ಮ ಗುರಿ ಕರ್ನಾಟಕ. ಅಭಿವೃದ್ಧಿಯ ಮಂತ್ರದೊಂದಿಗೆ ನಾವು ಚುನಾವಣೆಗೆ ಹೋಗಬೇಕಿದೆ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ರೀತಿಯಲ್ಲೂ ಸಜ್ಜಾಗಬೇಕು ಎಂದು ಹೇಳಿದ್ದಾರೆ. ಮೋದಿ ಅವರು ಮೊದಲ ಬಾರಿಗೆ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಸುದೀರ್ಘಕಾಲ ರಾಜ್ಯ ನಾಯಕರ ಜತೆ ಸಮಾಲೋಚನೆ ನಡೆಸಿದರು.
ಮುಂದಿನ ವಿಧಾನಸಭೆ ಚುನಾವಣೆ ಗೆಲ್ಲಲು ಸಂಘಟನಾತ್ಮಕವಾಗಿ ರೂಪಿಸಿರುವ ಕಾರ್ಯಕ್ರಮಗಳ ನೀಲನಕ್ಷೆಯನ್ನು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ವಿವರಿಸಿದರೆ, ವಿದ್ಯಾನಿಧಿ ಸೇರಿ ಜನಪರ ಕಾರ್ಯಕ್ರಮಗಳ ಬಗ್ಗೆ ಆಡಳಿತಾತ್ಮಕವಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದರು