ಸಮಗ್ರ ನ್ಯೂಸ್: ಮಧ್ಯರಾತ್ರಿಯಿಂದ ಇಂದು ಬೆಳಗ್ಗೆವರೆಗೆ ಸುರಿದ ಕುಂಭದ್ರೋಣ ಮಳೆಗೆ ರಾಮನಗರ, ಕನಕಪುರ, ಚನ್ನಪಟ್ಟಣ ತಾಲ್ಲೂಕುಗಳಲ್ಲಿ ಅವಾಂತರವೇ ಸೃಷ್ಟಿಯಾಗಿದ್ದು, ಜನರು ತತ್ತರಿಸುವಂತಾಗಿದೆ. ಭಾರೀ ಮಳೆಯಿಂದಾಗಿ ಬೆಂಗಳೂರು, ಮೈಸೂರು ರಸ್ತೆಯ ಹೆದ್ದಾರಿಯಲ್ಲಿ ನೀರು ತುಂಬಿದ್ದು, ಬಸ್ಸು, ಕಾರು ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಮುಳುಗಿ ತೇಲುತ್ತಿದ್ದವು.
ರಾಮನಗರ ತಾಲ್ಲೂಕಿನ ಸಂಗಬಸವನದೊಡ್ಡಿ, ಬಸವನಪುರ ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿಯ ಅಂಡರ್‍ಪಾಸ್‍ನಲ್ಲಿ ನೀರು ತುಂಬಿದ್ದು, ವಾಹನಗಳು ಮುಳುಗಡೆಯಾಗಿವೆ. ಎರಡೂ ಕಡೆಯೂ ಟ್ರಾಫಿಕ್‍ಜಾಮ್ ಉಂಟಾಗಿದ್ದು, ಕಿಲೋಮೀಟರ್ ಗಟ್ಟಲೇ ವಾಹನಗಳು ರಸ್ತೆಯಲ್ಲೇ ನಿಂತಿದ್ದವು. ಇಂದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ರಸ್ತೆಯಲ್ಲಿ ನೀರು ತುಂಬಿದ್ದರಿಂದ ವಾಹನಗಳನ್ನು ಬಿಟ್ಟು ಪ್ರಯಾಣಿಕರು ಹಾಗೂ ಜನರು ಹೊರಬಂದಿದ್ದಾರೆ. ವಡೇರಹಳ್ಳಿ ಬಳಿ ಕೂಡ ಭಾರೀ ಪ್ರಮಾಣದ ನೀರು ರಸ್ತೆಗೆ ನುಗ್ಗಿ ಅನಾಹುತವನ್ನೇ ಸೃಷ್ಟಿಸಿದೆ. ರಾಮನಗರದ ರೈಲು ನಿಲ್ದಾಣದ ಹಳಿಗಳ ಮೇಲೆ ಭಾರೀ ಪ್ರಮಾಣದ ನೀರು ನಿಂತಿದ್ದು, ರೈಲು ಸಂಚಾರವು ಅಸ್ತವ್ಯಸ್ತಗೊಂಡಿತ್ತು. ರೈಲ್ವೆ ನಿಲ್ದಾಣ ಬಳಿಯ ಅಂಡರ್‍ಪಾಸ್ ಮತ್ತು ಹಳ್ಳದಲ್ಲಿ ಭಾರೀ ಪ್ರಮಾಣದ ನೀರು ನಿಂತಿದ್ದರಿಂದ ಸಿಬ್ಬಂದಿ ಬೋಟ್ ಬಳಸಿ ಹಳ್ಳ ದಾಟಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ಹಳ್ಳದಲ್ಲಿ ಪ್ರವಾಹ ರೀತಿಯಲ್ಲಿ ನೀರು ಕಂಡುಬಂದಿತು. ಈ ನಡುವೆ ಖಾಸಗಿ ಬಸ್ಸೊಂದು ಪರ್ಯಾಯ ಮಾರ್ಗದಲ್ಲಿ ಹೋಗಿ ಬಿಳಿಗುಂಬದ ಬಳಿ ನೀರಿನಲ್ಲಿ ಸಿಲುಕಿದೆ. ಬಸ್‍ನಲ್ಲಿದ್ದ 50 ಪ್ರಯಣಿಕರನ್ನು ಕಿಟಕಿ ಮೂಲಕ ಸ್ಥಳೀಯರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಮನಗರ, ಕನಕಪುರ, ಚನ್ನಪಟ್ಟಣ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿಬಿದ್ದಿವೆ ಚಾಮುಂಡಿಪುರದ ಬಳಿ ಇರುವ ಬೋಳಪ್ಪನಹಳ್ಳಿ ಕೆರೆ ಏರಿ ಬಿರುಕುಬಿಟ್ಟಿದ್ದು, ಅಪಾಯದ ಆತಂಕ ಎದುರಾಗಿದೆ.