ಸಮಗ್ರ ನ್ಯೂಸ್: ದೇಶದಲ್ಲಿ ಸ್ವಾತಂತ್ರ್ಯ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗಿದೆ. ಕಾಶ್ಮೀರಿಂದ ಕನ್ಯಾಕುಮಾರಿಯವರೆಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದು, 75 ವರ್ಷಗಳ ಸ್ವಾತಂತ್ರ್ಯ ಸಂಭ್ರಮಕ್ಕೆ ಇನ್ನಷ್ಟು ಮೆರಗು ಸಿಕ್ಕಿದೆ.
ಕೆಂಪುಕೋಟೆಯ ಆವರಣದಲ್ಲಿ ಪ್ರಧಾನಿ ರಾಷ್ಟ್ರಧ್ವಜ ಹಾರಿಸಿದ ಬಳಿಕ, ವಿವಿಧ ರಾಜ್ಯಗಳ ರಾಜಧಾನಿಗಳಲ್ಲಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಧ್ವಜ ಹಾರಿಸಿದರು. ಈವರೆಗೂ ಗಲಾಟೆಯಿಂದಲೇ ಸುದ್ದಿಯಾಗುತ್ತಿದ್ದ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿರುವ ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಬಳಿಕ, ವಂದೇ ಮಾತರಂ ಹಾಗೂ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಲಾಗಿದೆ.
ಭಾರತ ಮಾತ್ರವಲ್ಲದೆ, ಅಮೆರಿಕದ ಬೋಸ್ಟನ್ನಲ್ಲಿ ಹಾಗೂ ಯುರೋಪ್ ಸಮುದ್ರದಲ್ಲಿರುವ ಐಎನ್ಎಸ್ ತರಂಗಿಣಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಕೋಲ್ಕತ್ತಾದಲ್ಲಿ ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಜಾನಪದ ಕಲಾವಿದರೊಂದಿಗೆ ನೃತ್ಯ ಮಾಡಿದರು. ಸುದ್ದಿ ಸಂಸ್ಥೆ ಎಎನ್ಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಮುಖ್ಯಮಂತ್ರಿಗಳು ಜಾನಪದ ಕಲಾವಿದರೊಂದಿಗೆ ಸೇರಿಕೊಂಡು ಅವರೊಂದಿಗೆ ನೃತ್ಯ ಮಾಡುವುದನ್ನು ಕಾಣಬಹುದು.
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜನರಿಗೆ ನಮನ ಸಲ್ಲಿಸಿದ ಮಮತಾ ಬ್ಯಾನರ್ಜಿ, ಭಾರತೀಯರು ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು. ಭಾರತೀಯರು “ಸ್ವಾತಂತ್ರ್ಯವನ್ನು ಪಡೆದ ತಮ್ಮ ಪೂರ್ವಜರ ಪವಿತ್ರ ಪರಂಪರೆಯನ್ನು ಸಂರಕ್ಷಿಸಬೇಕು” ಎಂದು ಅವರು ಹೇಳಿದರು.