ಸಮಗ್ರ ನ್ಯೂಸ್: ಕುರುಗೋಡು ಪಿ ಎಸ್ ಐ ಆಗಿದ್ದ ಮಣಿಕಂಠ ಅವರನ್ನು ಬಳ್ಳಾರಿ ಎಸ್ ಪಿ ಸೈದುಲು ಅಡಾವತ್ ಅವರು ಅಮಾನತುಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಮೂರು ದಿನಗಳ ಹಿಂದೆ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿ ನಡೆದ ಸಾರ್ವಜನಿಕ ಸಭೆ ವೇಳೆ ಕಾನೂನು ಸುವ್ಯವಸ್ಥೆ ವಿಚಾರವಾಗಿ ಹೋದಾಗ ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೊಬ್ಬರ ಮೇಲೆ ಪಿ ಎಸ್ ಐ ಮಣಿಕಂಠ ಹಲ್ಲೆ ಮಾಡಿ ಅವಾಚ್ಯ ಶಬ್ದ ಗಳಿಂದ ನಿಂದಿಸಿದ್ದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ನಿನ್ನೆಯಿಂದ ವೈರಲ್ ಆಗಿತ್ತು. ದೂರು ನೀಡಿದ ಅನ್ವಯ ಪಿ ಎಸ್ ಐ ಮಣಿಕಂಠ ಅವರ ವಿರುದ್ಧ ಕುರುಗೋಡು ಠಾಣೆಯಲ್ಲಿ ದೂರು ದಾಖಲಾಗಿದೆ. ಕುರುಗೋಡು ಸಿಪಿಐ ಅವರು ನೀಡಿದ ವರದಿ ಆಧರಿಸಿ ಎಸ್ ಪಿ ಯವರು ಪಿ ಎಸ್ ಐ ಮಣಿಕಂಠ ಅವರನ್ನು ಅಮಾನತು ಗೊಳಿಸಿದ್ದಾರೆ.
ಕೋಳೂರಿನಲ್ಲಿ ಮೂರು ದಿನಗಳ ಹಿಂದೆ ಯುವಕನೊಬ್ಬನ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳನ್ನು ಬಳಸಿದ ವಿರುದ್ಧ ಪಿಎಸ್ ಐ ಮಣಿಕಂಠ ಅವರ ವಿರುದ್ಧ ಗ್ರಾಮದ ಮುಖಂಡರು ಕುರುಗೋಡು ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಈ ನಡುವೆ ಸರಕಾರ ಪಿ ಎಸ್ ಐ ಮಣಿಕಂಠ ಅವರನ್ನು ಗುರುವಾರ ಬಳ್ಳಾರಿ ಗಾಂಧಿನಗರ ಠಾಣೆಗೆ ವರ್ಗಾವಣೆ ಮಾಡಿತ್ತು.
ಮಾಜಿ ಶಾಸಕ ಸುರೇಶ್ ಬಾಬು ಜನ್ಮದಿನದ ಅಂಗವಾಗಿ ಹಾಕಲಾಗಿದ್ದ ಬ್ಯಾನರ ನ್ನು ಕೆಲ ದುಷ್ಕರ್ಮಿಗಳು ಹರಿದಿದ್ದರು, ಅದರಲ್ಲಿ ಯುವಕ ಇದ್ದಾನೆ ಎಂದು ಶಂಕಿಸಿ ಪಿಎಸ್‌ಐ ಮಣಿಕಂಠ ಜನರ ಮಧ್ಯದಲ್ಲೇ ಹಿಗ್ಗಾಮುಗ್ಗಾ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.