ಸಮಗ್ರ ನ್ಯೂಸ್: ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿಯ ಗುತ್ತಿಗೆದಾರರ ನಿರ್ಲಕ್ಷ್ಯದ ಪರಿಣಾಮ ಭೂಕುಸಿತ ಉಂಟಾಗಿ 50ಕ್ಕೂ ಹೆಚ್ಚು ಎಕರೆ ಕಾಫಿ ತೋಟ ಹಾಗೂ ಗದ್ದೆಗೆ ಹಾನಿಯಾಗಿದ್ದು ಕೂಡಲೆ ಪರಿಹಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಂತ್ರಸ್ತರು ಕೆಲಕಾಲ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ 75 ದೋಣಿಗಲ್ ಸಮೀಪ ಭೂಕುಸಿತ ಉಂಟಾಗಿ ಸುಮಾರು 15 ಮಂದಿಯ ಕಾಫಿ ತೋಟ ಹಾಗೂ ಗದ್ದೆಗಳಿಗೆ ತೀವ್ರ ಹಾನಿಯಾಗಿದೆ. ಆದರೆ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯಾವುದೆ ಅಧಿಕಾರಿಗಳು ಬಂದಿಲ್ಲ, ಕಳೆದ 7 ವರ್ಷಗಳಿಂದ ಈ ಕಾಮಗಾರಿ ಮಾಡುತ್ತಲೆ ಇದ್ದಾರೆ. ಭೂಕುಸಿತದಿಂದ ಸುಮಾರು 50ಎಕರೆಗೂ ಹೆಚ್ಚು ಕಾಫಿ ತೋಟ ಗದ್ದೆ ಸಂಪೂರ್ಣ ನಾಶವಾಗಿದೆ. ಗುತ್ತಿಗೆದಾರರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ದೋಣಿಗಲ್ ಸಮೀಪ ಸಂತ್ರಸ್ತರು ಬಂದು ರಸ್ತೆಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿದ್ದರಿಂದ ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಂ ಉಂಟಾಗಿತ್ತು.
ಅಂತಿಮವಾಗಿ ತಹಶೀಲ್ದಾರ್ ಜಯಕುಮಾರ್ ಹಾಗೂ ನಗರ ಠಾಣೆಯ ಪಿಎಸ್‌ಐ ಶಿವಶಂಕರ್ ಪ್ರತಿಭಟನಕಾರರನ್ನು ಸಮಾಧಾನಗೊಳಿಸಿದ ಮೇಲೆ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ವಾಹನಗಳನ್ನು ತೆಗೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.