ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಮಾಡಿದ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಾದ ಶಿಯಾಬುದ್ದೀನ್, ರಿಯಾಝ್ ಅಂಕತ್ತಡ್ಕ, ರಶೀದ್ ಎಲಿಮಲೆ ಎಂದು ಗುರುತಿಸಲಾಗಿದ್ದು ಬಂಧಿತರೆಲ್ಲರೂ ಸ್ಥಳೀಯ ನಿವಾಸಿಗಳಾಗಿದ್ದಾರೆ. ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ 10 ಮಂದಿಯ ಬಂಧನವಾಗಿದೆ. ಬಂಧಿತ ಶಿಹಾಬುದ್ದೀನ್(33) ಕೊಕ್ಕೋ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಬಶೀರ್ ಮತ್ತು ರಿಯಾಝ್(27) ಹೊಟೇಲ್ ಕೆಲಸ ಮಾಡುತ್ತಿದ್ದರು. ಈ ಮೂವರನ್ನು ತಲಪಾಡಿ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.
ಹತ್ಯೆ ಮಾಡಿದ್ದು ಯಾಕೆ? ಪ್ರವೀಣ್ ಹತ್ಯೆಯನ್ನು ಯಾಕೆ ಮಾಡಿದ್ದಾರೆ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಬಂಧಿತರಿಗೆ ಪಿಎಫ್ಐ, ಎಸ್ಡಿಪಿಐ ಜೊತೆ ಲಿಂಕ್ ಕುರಿತು ತನಿಖೆ ನಡೆಸುತ್ತಿರುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಕೇರಳ ಲಿಂಕ್ ಹಾಗೂ ಯಾರೆಲ್ಲ ಸಹಕಾರ ನೀಡಿದ್ದಾರೆ ಎಂಬ ತನಿಖೆ ನಡೆಸಲಾಗುತ್ತಿದ್ದು, ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ಹತ್ಯೆ ಮಾಡಿದ್ದು ಹೇಗೆ? ಬೆಳ್ಳಾರೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರು ಕೋಳಿ ಉದ್ಯಮವನ್ನೂ ಆರಂಭಿಸಿ ಯಶಸ್ವಿಯಾಗಿದ್ದರು. ಹೀಗಾಗಿ ಪ್ರವೀಣ್ ಅವರನ್ನು ಹತ್ಯೆಯನ್ನು ಮಾಡಲು ಗ್ಯಾಂಗ್ ಸಿದ್ಧತೆ ಮಾಡಿತ್ತು. ಹತ್ಯೆಗಾಗಿ ಒಂದು ವಾರಗಳ ತಯಾರಿ ಮಾಡಿದ್ದ ಹಂತಕರು ಜುಲೈ 21ರ ಬಳಿಕ ಪ್ರತಿದಿನ ಪ್ರವೀಣ್ ಅಂಗಡಿ ಬಳಿ ಬರುತ್ತಿದ್ದರು. ಆದರೆ ಪ್ರವೀಣ್ ಜೊತೆಗೆ ಪತ್ನಿ ಇರುತ್ತಿದ್ದನ್ನು ಗಮನಿಸಿ ಮರಳುತ್ತಿದ್ದರು.
ಜುಲೈ 26 ರಂದು ಪ್ರವೀಣ್ ಒಬ್ಬರೇ ಅಂಗಡಿಯಲ್ಲಿ ಇರುವುದನ್ನು ಗಮನಿಸಿದ್ದ ಗ್ಯಾಂಗ್ ಹತ್ಯೆ ಮಾಡಿ ಹಳೆಯ ಸ್ಪ್ಲೆಂಡರ್ ಬೈಕ್ ಏರಿ ಪರಾರಿಯಾಗಿತ್ತು. ನಂಬರ್ ಪ್ಲೇಟ್ ಅಸ್ಪಷ್ಟವಾಗಿ ಕಾಣುತ್ತಿದ್ದ ಬೈಕ್ ಏರಿದ್ದ ಇವರು ಬಳಿಕ ಕಾರಿನಲ್ಲಿ ಕೇರಳಕ್ಕೆ ಪರಾರಿಯಾಗಿದ್ದರು.
ಮೊದಲೇ ಪ್ಲ್ಯಾನ್:
ಪ್ರವೀಣ್ ಹತ್ಯೆಗೆ ಮೊದಲೇ ಕೇರಳದಲ್ಲಿ ಎಲ್ಲಿ ತಂಗಬೇಕು ಎಂಬುದನ್ನು ಹಂತಕರು ಪ್ಲ್ಯಾನ್ ಮಾಡಿದ್ದರು. ಅದರಂತೆ ಮೊದಲು ತಲಶೇರಿ, ಬಳಿಕ ಕಣ್ಣೂರು, ಮಲ್ಲಪುರಂನಲ್ಲಿರುವ ಅಡಗುತಾಣದಲ್ಲಿ ತಂಗಿದ್ದರು. 15 ದಿನದ ಅಂತರದಲ್ಲಿ ಏಳು ಕಡೆಗಳಲ್ಲಿ ಹಂತಕರು ಅಶ್ರಯ ಪಡೆದಿದ್ದರು. ಹಂತಕರು ನೆಲೆಸಿದ್ದ ಜಾಗ ಪತ್ತೆಯಾಗಿ ಪೊಲೀಸರು ಸ್ಥಳಕ್ಕೆ ಹೋದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗುತ್ತಿದ್ದರು.
ಪೊಲೀಸರ ಪ್ಲ್ಯಾನ್ ಏನಿತ್ತು?
ಆರೋಪಿಗಳ ಬುಡಸಮೇತ ಹೆಡೆಮುರಿ ಕಟ್ಟಲು ಎಡಿಜಿಪಿ ಅಲೋಕ್ ಕುಮಾರ್ ಪ್ಲ್ಯಾನ್ ಮಾಡಿದ್ದರು. ಮೊದಲು ಹಂತಕರ ಕುಟುಂಬ ಬಳಿಕ ಹಂತಕರ ಆತ್ಮೀಯರ ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಕೃತ್ಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗವಹಿಸಿದವರ ಎಲ್ಲರ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಹಂತಕರಿಗೆ ಆಶ್ರಯ ನೀಡಿದವರಿಗೂ ಖಡಕ್ ಎಚ್ಚರಿಕೆ ನೀಡಿದ್ದರು.
ಹದಿನೈದು ದಿನದಲ್ಲಿ ಐದು ಬಾರಿ ಬೆಳ್ಳಾರೆಗೆ ಭೇಟಿ ನೀಡಿದ್ದ ಎಡಿಜಿಪಿ ಅಲೋಕ್ ಕುಮಾರ್ ಬುಧವಾರವೂ ಆರು ಜಿಲ್ಲೆಯ ಎಸ್ಪಿಗಳ ಜೊತೆ ಸಭೆ ನಡೆಸಿದ್ದರು. ಹಂತಕರಿಗೆ ಆಶ್ರಯ ನೀಡಿದವರಿಗೆ ಅಡಗುತಾಣಗಳಿಗೆ ಸೇನಾ ಮಾದರಿಯಲ್ಲೇ ಕಾರ್ಯಾಚರಣೆ ಮಾಡಲಾಗುವುದು ಎಚ್ಚರಿಕೆಯ ಸಂದೇಶವನ್ನು ಅಲೋಕ್ ಕುಮಾರ್ ರವಾನಿಸಿದ್ದರು. ಎಚ್ಚರಿಕೆ ನೀಡಿದ ಬೆನ್ನಲ್ಲೇ ಹಂತಕರು ಸೆರೆಯಾಗಿದ್ದಾರೆ.
ಪ್ರವೀಣ್ ನೆಟ್ಟಾರು ಹಂತಕರ ಬಂಧನಕ್ಕೆ ಪೊಲೀಸರು 6 ವಿಶೇಷ ತಂಡವನ್ನು ರಚಿಸಿತ್ತು. ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದರಿಂದ ಈ ಹತ್ಯೆ ಕೇಸ್ ತನಿಖೆಯನ್ನು ರಾಜ್ಯ ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವರ್ಗಾಯಿಸಿತ್ತು. ಸರ್ಕಾರದ ಸೂಚನೆಯಂತೆ ಪ್ರವೀಣ್ ಕೇಸನ್ನು ಎನ್ಐಎಗೆ ಹಸ್ತಾಂತರಿಸಲಾಗುತ್ತದೆ. ಅಲ್ಲದೇ ಫಾಝಿಲ್ ಕೇಸ್ ಅನ್ನೂ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.