ಸಮಗ್ರ ನ್ಯೂಸ್: ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಗ್ರಾಮದ ಗುಡ್ಡ ಪ್ರದೇಶದಲ್ಲಿ ಭಾರೀ ಬಿರುಕುಗಳು ಕಾಣಿಸಿಕೊಂಡಿದ್ದು, ಮಣ್ಣು ಕುಸಿಯುವ ಸಾಧ್ಯತೆ ಕಾರಣ ರಾತ್ರಿ ಸಂಚಾರ ನಿರ್ಬಂಧಿಸಲಾಗಿದೆ
ಕಳೆದ ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ನಿರಂತರ ಮಳೆ ಹಾಗೂ ಭಾರೀ ಗಾಳಿಯಿಂದಾಗಿ ಮಡಿಕೇರಿ ಸಮೀಪದ ಮದೆನಾಡು ಗ್ರಾಮದ ಕರ್ತೋಜಿ ಎಂಬಲ್ಲಿ, ರಸ್ತೆ ಪಕ್ಕದ ಗುಡ್ಡದಲ್ಲಿ ಭಾರೀ ಬಿರುಕು ಮೂಡಿದೆ. ಅಲ್ಪಸ್ವಲ್ಪ ಕುಸಿತವೂ ಸಂಭವಿಸಿದೆ.
ಇದೀಗ ಯಾವುದೇ ಕ್ಷಣದಲ್ಲೂ ಮಣ್ಣು ಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವ ಕಾರಣ ಸಂಪರ್ಕ ಕಡಿತದ ಭೀತಿ ಎದುರಾಗಿದೆ. ಪ್ರಾಕೃತಿಕ ವಿಕೋಪಗಳು ಘಟಿಸಿದ 2018ನೇ ಸಾಲಿನಲ್ಲಿ ಈಗ ಬಿರುಕು ಬಿಟ್ಟಿರುವ ಬೆಟ್ಟ ಪ್ರದೇಶದಲ್ಲೆ ಭಾರೀ ಪ್ರಮಾಣದ ಭೂ ಕುಸಿತವುಂಟಾಗಿ, ರಾಷ್ಟ್ರೀಯ ಹೆದ್ದಾರಿ ಕುಸಿದು ಸಂಪರ್ಕ ಕಡಿತಗೊಂಡಿತ್ತು.
ಈ ಹಿನ್ನಲೆಯಲ್ಲಿ ಮಡಿಕೇರಿ- ಸಂಪಾಜೆ ರಸ್ತೆಯಲ್ಲಿ ಆ.10 ರಾತ್ರಿಯಿಂದ ಆ.12 ರ ಬೆಳಗ್ಗೆ 6.30 ರವರೆಗೆ ರಾತ್ರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.