ಸಮಗ್ರ ನ್ಯೂಸ್: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ನಿವಾಸಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಭೇಟಿ ನೀಡಿದರು. ಈ ವೇಳೆ ಪ್ರವೀಣ್ ಕುಟುಂಬಕ್ಕೆ ಸಾಂತ್ವನ ಹೇಳಿದ ಮಾಜಿ ಸಿಎಂ ಕುಮಾರಸ್ವಾಮಿ 5 ಲಕ್ಷ ರೂಪಾಯಿಗಳ ಚೆಕ್ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಪ್ರವೀಣ್ ಪತ್ನಿ ಮತ್ತು ಅವರ ತಾಯಿ ಹೆಸರಲ್ಲಿ 5 ಲಕ್ಷ ಚೆಕ್ ನೀಡಿದ್ದಾರೆ.
ಮೃತ ಮಸೂದ್ ಕುಟುಂಬಕ್ಕೂ ಶಾಂತಿ ಸಿಗಬೇಕು. ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕು. ಆಗ ನಮಗೆ ನ್ಯಾಯ ಸಿಗುತ್ತದೆ ಎಂದು ಕುಮಾರಸ್ವಾಮಿ ಬಳಿ ಪ್ರವೀಣ್ ಪತ್ನಿ ನೂತನ ನೋವು ತೋಡಿಕೊಂಡರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ, ನಮ್ಮ ಪೊಲೀಸರೇ ಪ್ರಕರಣವನ್ನು ಬಗೆಹರಿಸಲು ಶಕ್ತರಿದ್ದಾರೆ. ಈ ಪ್ರಕರಣವನ್ನು ಎನ್ಐಎಗೆ ಕೊಟ್ಟು ಸರ್ಕಾರ ಕೈತೊಳೆದುಕೊಳ್ಳಲು ಯೋಚಿಸುತ್ತಿದೆ. ಹಳೆಯ ಕೇಸ್ ಗಳೇ ಇನ್ನೂ ಬಾಕಿ ಇರುವಾಗ ಇದನ್ನೂ ಎನ್ಐಎಗೆ ಕೊಟ್ಟಿರುವ ಸರ್ಕಾರದ ನಡೆ ಮೂರ್ಖತನ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೆಗೌಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜೆಡಿಎಸ್ ಮುಖಂಡರು ಮಾಜಿ ಮುಖ್ಯಮಂತ್ರಿಗಳ ಜತೆಯಲ್ಲಿದ್ದರು.