ಸಮಗ್ರ ನ್ಯೂಸ್: ಮೀನುಗಾರಿಕೆಗೆ ಸರಕಾರ ವಿಧಿಸಿದ್ದ 61 ದಿನಗಳ ನಿಷೇಧ ಜು. 31ಕ್ಕೆ ಮುಕ್ತಾಯಗೊಂಡಿದ್ದು, ಆ. 1ರಿಂದ ದೋಣಿಗಳು ಸಮುದ್ರಕ್ಕಿಳಿಯಲಿವೆ. ಈ ನಿಟ್ಟಿನಲ್ಲಿ ಮೀನುಗಾರಿಕೆಗೆ ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮೀನುಗಾರಿಕೆಗೆ ಬೋಟು, ಎಂಜಿನ್‌ಗಳನ್ನು ದುರಸ್ತಿಗೊಳಿಸಿ ಬಲೆಗಳನ್ನು ಸಿದ್ಧಗೊಳಿಸಲಾಗಿದೆ.
ಐಸ್‌ಪ್ಲಾಂಟ್‌ಗಳು ರವಿವಾರವೇ ಕಾರ್ಯಾರಂಭಿಸಿದ್ದು, ಕಡಲಿಗಿಳಿಯುವ ಬೋಟುಗಳಿಗೆ ಮಂಜುಗಡ್ಡೆ ತುಂಬಿಸಲಾಗುತ್ತಿದೆ. ಸರಕಾರದ ತೆರಿಗೆ ರಹಿತ ಡೀಸೆಲ್ ನೀಡುವ ಕಾರ್ಯ ಸೋಮವಾರದಿಂದ ಪ್ರಾರಂಭವಾಗಲಿದೆ.
ಆಳಸಮುದ್ರಕ್ಕೆ ತೆರಳುವ ಬೋಟುಗಳಲ್ಲಿ 15 ದಿನಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಕೊಂಡೊಯ್ಯಲಾಗುತ್ತದೆ. ದೋಣಿಗಳ ಕಾರ್ಮಿಕರಲ್ಲಿ ಹೆಚ್ಚಿನವರು ಹೊರ ರಾಜ್ಯಗಳಿಗೆ ಸೇರಿದ್ದು ಊರಿನಿಂದ ಮರಳಿದ್ದಾರೆ.
ಆಳಸಮುದ್ರಕ್ಕೆ ತೆರಳುವ ಟ್ರಾಲ್ ಬೋಟುಗಳು ಸೋಮವಾರದಿಂದ ಮೀನುಗಾರಿಕೆಗೆ ತೆರಳಲು ನಿರ್ಧರಿಸಿವೆಯಾದರೂ ಆ. 3ರ ವರೆಗೆ ಸಮುದ್ರ ಪ್ರಕ್ಷುಬ್ಧವಾಗಿರುತ್ತದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಅಂದಿನ ಹವಾಮಾನ ನೋಡಿಕೊಂಡು ಕಡಲಿಗಿಳಿಯುವ ಸಾಧ್ಯತೆಗಳಿವೆ. ಆ. 12ರಂದು ಸಮುದ್ರ ಪೂಜೆ ಮಾಡಿ ಆ. 13ರಿಂದ ಮೀನುಗಾರಿಕೆಗೆ ನಡೆಸಲು ಪರ್ಸಿನ್ ಬೋಟುಗಳ ಮಾಲಕರು ತೀರ್ಮಾನಿಸಿದ್ದಾರೆ.