ಕಾರವಾರ: ಬಿಡದಿ ನಿತ್ಯಾನಂದನ ಲುಕ್, ಆತನಂತೆಯೇ ಮಾತುಗಾರಿಕೆ, ಹಾವಭಾವ. ನಾನೊಬ್ಬ ನಿತ್ಯಾನಂದನ ಸ್ವರೂಪ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು, ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಇದ್ದುಕೊಂಡೇ ಮುಗ್ಧ ಜನರಿಗೆ ಮೋಸ ಮಾಡುತಿದ್ದ ಸತ್ಯಾನಂದ ಸ್ವಾಮಿಯ ಅಸಲಿ ಮುಖವನ್ನು ಮಂಗಳೂರಿನ ಭಜರಂಗದಳದ ಕಾರ್ಯಕರ್ತರು ಹೊರಗೆಳೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಚವೆಯ ಬೋರಳ್ಳಿಯಲ್ಲಿ ಸತ್ಯಾನಂದ ಉದ್ಭವವಾಗಿ ಬಿಟ್ಟಿದ್ದಾನೆ. ಈತ ತಾನು ಧರಿಸುವ ಕಾವಿಯಿಂದ ಹಿಡಿದು ಹಾವಾಭಾವದಲ್ಲೂ ನಿತ್ಯಾನಂದನ ಅನುಕರಣೆ ಮಾಡುತ್ತಾನೆ.
ಈತನಿಗೆ ಮಹಿಳೆಯರು ಎಂದರೆ ತುಂಬಾ ಇಷ್ಟ. ಹೀಗಾಗಿ ನಿತ್ಯಾನಂದನ ಪ್ರಭಾವದಲ್ಲಿ ಓರ್ವ ಮಹಿಳೆಯನ್ನು ಅತ್ಯಾಚಾರ ಮಾಡಲು ಹೋಗಿ ಜೈಲಿನ ಕಂಬಿ ಎಣಿಸಿ ಬೇಲ್ ಮೂಲಕ ಹೊರಬಂದಿದ್ದಾನೆ.
ತನ್ನ ಚಾಳಿ ಬುದ್ಧಿಯನ್ನು ಮುಂದುವರಿಸಿರುವ ಈತ ಸತ್ಯಾನಂದ ಪರಮಶಿವ ಎಂಬ ಫೇಸ್‌ಬುಕ್ ಅಕೌಂಟ್ ಓಪನ್ ಮಾಡಿ ಪ್ರತಿ ದಿನ ಧಾರ್ಮಿಕ ವಿಚಾರವಾಗಿ ದಿನಗಟ್ಟಲೆ ಪ್ರವಚನ ನೀಡುತಿದ್ದ.
ಭಾರತ ಮಾತೆ ನನ್ನ ಹೆಂಡತಿ, ಇಲ್ಲಿರುವ ಜನರು ನನ್ನ ಮಕ್ಕಳು ಎಂದು ಕೆಟ್ಟದಾಗಿ ಹೇಳುವುದರ ಜೊತೆಗೆ ಹಿಂದೂ ದೇವರು, ಧರ್ಮ ಕ್ಷೇತ್ರದ ಬಗ್ಗೆ ಅವಹೇಳನ ಮಾಡುತ್ತಿದ್ದ. ತಾನೇ ದೇವರೆಂದು ಹೇಳುವ ಮೂಲಕ ಈತ ನಿತ್ಯಾನಂದನಿಗೆ ಕಮ್ಮಿ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದ್ದನು.
ಈತ ಫೇಸ್‌ಬುಕ್ ಮೂಲಕ ಮುಗ್ಧ ಮಹಿಳೆಯರನ್ನು ತನ್ನ ನಯವಾದ ಮಾತಿನಿಂದ ಆಕರ್ಷಿಸಿ ಹಣ ಗಳಿಸುವುದಲ್ಲದೆ, ದೇವಿ ದರ್ಶನ ಮಾಡಿಸುತ್ತೇನೆ, ನನ್ನ ಆಶ್ರಮಕ್ಕೆ ಬನ್ನಿ ಎಂದು ಕರೆಸಿಕೊಳ್ಳುತ್ತಿದ್ದನು.
ಹೀಗೆ ಮಂಗಳೂರಿನ ಮಹಿಳೆಗೆ ಕರೆಸಿ, ದೇವರನ್ನು ತೋರಿಸಲು ಹೋಗಿದ್ದವ ಇದೀಗ ಭಜರಂಗದಳ ಕಾರ್ಯಕರ್ತರಿಂದ ಗೂಸಾ ತಿಂದು ಕ್ಷಮಾಪಣೆ ಕೇಳಿ ಕಾವಿ ಕಳಚಿದ್ದಾನೆ.
ಈ ಕಳ್ಳ ಸ್ವಾಮೀಜಿಯ ನಿಜವಾದ ಹೆಸರು ಶೇಖರ್ ಸಣ್ತಮ್ಮ ಪಟಗಾರ್. ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಳ್ಳಿ ಗ್ರಾಮದಲ್ಲಿ ಆಟೋ ಚಲಾಯಿಸಿಕೊಂಡಿದ್ದನು.
ಕಳೆದೆರಡು ವರ್ಷಗಳಿಂದ ಏನಾಯಿತು ಗೊತ್ತಿಲ್ಲ ಏನೋ ತನ್ನ ಮೈ ಮೇಲೆ ದೇವಿ ಬರುತ್ತಾಳೆ. ನಾನು ನಿತ್ಯಾನಂದನ ಸ್ವರೂಪಿ ಎಂದು ಕಾವಿ, ರುದ್ರಾಕ್ಷಿ ತೊಟ್ಟು ಸ್ವಯಂ ಘೋಷಿಸಿತ ಸ್ವಾಮೀಜಿ ಆಗಿದ್ದಾನೆ.