ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಇಂಥ ಹೇಯಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಈ ಸಂಬಂಧ ಸಿಎಂ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಇಂಥ ಹೇಯಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು. ಪ್ರವೀಣ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ. ಓಂ ಶಾಂತಿಃ ಅಂತ ಸಂತಾಪ ಸೂಚಿಸಿದ್ದಾರೆ.
ಘಟನೆ ವಿವರ:
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿರುವ ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಅವರ ಅಂಗಡಿ ಬಳಿ ಬೈಕ್‌ನಲ್ಲಿ ಬಂದ ಮೂವರು ಹಿಂದಿನಿಂದ ದಾಳಿ ನಡೆಸಿ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಇಲ್ಲಿಗೆ ಸಮೀಪದ ಕಳಂಜದಲ್ಲಿ ಗುಂಪು ಹಲ್ಲೆಗೊಳಗಾಗಿದ್ದ ಮಸೂದ್ ಎಂಬ ಯುವಕ ಚಿಕಿತ್ಸೆ ಫಲಕಾರಿ ಆಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿ ಎಂಟು ಆರೋಪಿಗಳು ಬಂಧಿಸಲ್ಪಟ್ಟಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರ ಬೆನ್ನಿಗೇ ಈ ಘಟನೆ ನಡೆದಿರುವುದರಿಂದ ಪ್ರತೀಕಾರ ಎಂಬ ಶಂಕೆ ಮೂಡಿದೆ.