ಸಮಗ್ರ ನ್ಯೂಸ್: ಕಳೆದ ಎರಡು ವಾರಗಳ ಹಿಂದೆ, 47 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಮಾಡಿದ್ದು, ಇದೀಗ 20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದೆ.
ಇದರಲ್ಲಿ ಈಗ ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷರ ಆಯ್ಕೆ ಸ್ವತಃ ಬಂದರು ಮತ್ತು ಮೀನುಗಾರಿಕಾ ಸಚಿವರಿಗೆ ಗೊತ್ತೇ ಇಲ್ವಂತೆ. ಹೀಗೆಂದು ಸ್ವತಃ ಸಚಿವ ಅಂಗಾರರು ಹೇಳಿದ್ದಾರೆನ್ನಲಾದ ಆಡಿಯೋ ವೈರಲ್ ಆಗ್ತಿದೆ. ಮೀನುಗಾರಿಕಾ ಸಚಿವ ಅಂಗಾರರ ಬಳಿ ಮೊಗವೀರ ಮುಖಂಡ , ಬಿಜೆಪಿ ಮಾಜಿ ಪದಾಧಿಕಾರಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಮೀನುಗಾರಿಕೆ ಅಭಿವೃದ್ದಿ ನಿಗಮ ಅಧ್ಯಕ್ಷರಾಗಿ ಸುಳ್ಯದ ಬಿಜೆಪಿ ನಾಯಕ ಎ.ವಿ ತೀರ್ಥರಾಮರನ್ನು ಆಯ್ಕೆ ಮಾಡಿ ಆದೇಶಿಸಲಾಗಿತ್ತು. ಅವರ ಆಯ್ಕೆ ನಂತರ ಮೊಗವೀರ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಆರೋಪ ಕೇಳಿಬಂದಿದೆ.
ಈ ಬಗ್ಗೆ ಸಚಿವ ಸುಳ್ಯ ಶಾಸಕ ಎಸ್. ಅಂಗಾರರಿಗೆ ಬಿಜೆಪಿಯ ಜಿಲ್ಲಾ ಪ್ರಕೋಷ್ಠದ ಮಾಜಿ ಪದಾಧಿಕಾರಿ ನವೀನ್ ಸುವರ್ಣ ತಣ್ಣಿರುಬಾವಿ ಎನ್ನುವವರು ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಈ ಹಿಂದೆ ಕಾಂಗ್ರೇಸ್ ಸರ್ಕಾರ ಇದ್ದಾಗಲೂ ಮೀನುಗಾರರಿಗೆ ನ್ಯಾಯ ಸಿಕ್ಕಿತ್ತು. ಆದರೆ ಬಿಜೆಪಿ ಪರವಾಗಿ ನಿಂತಿದ್ದ ಮೊಗವೀರರಿಗೆ ಅನ್ಯಾಯ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತವಾಗಿತ್ತು.
ಮೀನುಗಾರಿಕೆಯ ಬಗ್ಗೆ ಅನುಭವವಿಲ್ಲದ ಆಯ್ಕೆಯ ಹಿಂದೆ ನಿಮ್ಮ ಕೈವಾಡವೂ ಇರಬಹುದು ಎಂದು ನವೀನ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದರು. ಆಗ ಅಂಗಾರರು “ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ, ನನಗೆ ಆ ಬಗ್ಗೆ ಗಮನಕ್ಕೆ ಬಂದಿಲ್ಲ” ಎಂದರು.
ಪಕ್ಷಕ್ಕೆ ಮಣ್ಣು ಹೊತ್ತವರು ಇರುವಾಗ ಬೇರೆಯವರಿಗೆ ಕೊಡುವುದು ಸರಿಯೇ? ಎಂದು ಸಚಿವರನ್ನು ಪ್ರಶ್ನಿಸಿದರು. ಆಗ ಉತ್ತರಿಸಿದ ಸಚಿವರು “ನೀವು ರಾಜ್ಯಾಧ್ಯಕ್ಷರನ್ನು ಕೇಳಿ ನನಗೆ ಏನೂ ಗೊತ್ತಿಲ್ಲ” ಎಂದು ಹೇಳಿರುವುದು ವೈರಲ್ ಆಗಿರುವ ಆಡಿಯೋದಲ್ಲಿ ಕೇಳಿ ಬರುತ್ತಿದೆ.