ಸಮಗ್ರ ನ್ಯೂಸ್: ನಗರದಲ್ಲಿ ಟ್ರಾಫಿಕ್ ಪೋಲಿಸರು ದುಡ್ಡು ವಸೂಲಿಗೆ ನಿಲ್ಲುತ್ತಾರೆ, ಅವರಿಗೆ ಕಿಂಚಿತ್ತೂ ದಯೆ ಕರುಣೆ ಅನ್ನೋದೆ ಇಲ್ಲ ಎಂಬ ಆಪಾದನೆ ಮಧ್ಯೆ ಇಲ್ಲೊಬ್ಬ ಪೊಲೀಸ್ ಕಾನ್ಸ್‌ಟೇಬಲ್ ಸಮಾಜಮುಖಿ ಕಾರ್ಯ ಮಾಡಿ ಭೇಷ್ ಎನಿಸಿದ್ದಾರೆ. ಸಾರ್ವಜನಿಕರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಪೊಲೀಸ್ ಕಾನ್ ಸ್ಟೆಬಲ್ ಒಬ್ಬರು ವಾಹನ ಸವಾರರ ಕಷ್ಟ ಅರಿತು ಸ್ವತಃ ಗುಂಡಿ ಮುಚ್ಚಿ ಜನರ ಮನ ಗೆದ್ದಿದ್ದಾರೆ.
ಮಂಗಳೂರು ನಗರ ಪಶ್ಚಿಮ ಪಾಂಡೇಶ್ವರ ಸಂಚಾರಿ ಪೊಲೀಸ್ ಠಾಣೆಯ ಕಾನ್ ಸ್ಟೆಬಲ್ ಶರಣಪ್ಪ ಎಂಬವರು ನಗರದ ಸ್ಟೇಟ್ ಬ್ಯಾಂಕ್ ಬಳಿಯ ರಾವ್ ಆಂಡ್ ರಾವ್ ಸರ್ಕಲ್ ಬಳಿಯ ರಸ್ತೆಯಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿಯಿಂದ ದೊಡ್ಡ ದೊಡ್ಡ ಹೊಂಡ ನಿರ್ಮಾಣವಾಗಿತ್ತು. ಇಂದು ಬೆಳಿಗ್ಗೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶರಣಪ್ಪ ಅವರು ವಾಹನ ಸವಾರರ ಕಷ್ಟಕ್ಕೆ ಮರುಗಿ ಹತ್ತಿರದಲ್ಲೇ ಇದ್ದ ಇಂಟರ್ ಲಾಕ್ ತುಂಡುಗಳನ್ನು ಜೋಡಿಸಿ ರಸ್ತೆ ರಿಪೇರಿಗೆ ಇಳಿದಿದ್ದಾರೆ.
ಇದನ್ನು ಕಂಡ ರಿಕ್ಷಾ ಡ್ರೈವರ್ ಸೇರಿ ಹಲವರು ಇವರಿಗೆ ಕೈ ಜೋಡಿಸಿದರು. ಈ ಸಮಾಜಮುಖಿ ಕೆಲಸವನ್ನು ಸಾರ್ವಜನಿಕರೊಬ್ಬರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದ್ದು ಶರಣಪ್ಪ ಅವರ ಸಮಾಜಮುಖಿ ಕಾರ್ಯಕ್ಕೆ ಭೇಷ್ ಅಂದಿದ್ದಾರೆ.