ಸಮಗ್ರ ನ್ಯೂಸ್: ದೇಶದಲ್ಲಿ 3ನೇ ಮಂಕಿಪಾಕ್ಸ್ ಪ್ರಕರಣ ಕೇರಳದಲ್ಲೇ ದೃಢಪಟ್ಟಿದ್ದು, ಕರ್ನಾಟಕದಲ್ಲಿ ಆತಂಕ ಶುರುವಾಗಿದೆ. UAEಯಿಂದ ಮಲಪ್ಪುರಂಗೆ ಜುಲೈ 6ರಂದು ಹಿಂತಿರುಗಿದ್ದ ಕೇರಳದ 35 ವರ್ಷದ ವ್ಯಕ್ತಿಯೋರ್ವರಲ್ಲಿ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದೆ.
ಈ ಕುರಿತು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ ಸಹ ಕೇರಳದಲ್ಲಿಯೇ ಭಾರತದ ಮೊದಲ ಎರಡು ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿದ್ದವು. ಇದೀಗ 3ನೇ ಪ್ರಕರಣವೂ ಕೇರಳದಲ್ಲೇ ಖಚಿತಪಟ್ಟಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ನೆರೆಯ ರಾಜ್ಯ ಕೇರಳದಲ್ಲಿ ‘ಮಂಕಿಪಾಕ್ಸ್’ ರೋಗದ ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಕಣ್ಗಾವಲು ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಿದೆ. ಅಲ್ಲದೇ ಕರ್ನಾಟಕ ರಾಜ್ಯದಲ್ಲಿ ತೀವ್ರ ನಿಗಾ ಇರಿಸಲು ನಿರ್ಧರಿಸಿದೆ.
ಮಂಕಿಪಾಕ್ಸ್ಗೆ ಸಂಬಂಧಿಸಿದಂತೆ ಕೇಂದ್ರದ ಮಾರ್ಗಸೂಚಿಗಳು ಮತ್ತು ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳ ಪ್ರಕಾರ ಪರಿಣಾಮಕಾರಿ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಸೂಚನೆ ನೀಡಿದೆ.