ಸಮಗ್ರ ನ್ಯೂಸ್: ಮಂಗಳೂರು ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಲಿಪ್ ಲಾಕ್ ಮತ್ತು ರಾಸಲೀಲೆ ಪ್ರಕರಣವು ಟ್ರುಥ್ ಅಂಡ್ ಡೇರ್ ಗೇಮ್ ಹಿನ್ನೆಲೆಯಲ್ಲಿ ನಡೆದಿದೆ. ಸದ್ಯ ಇದರ ವೀಡಿಯೋ ವೈರಲ್‌ಗೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.
ಈ ಬಗ್ಗೆ ಕಾಲೇಜಿಗೆ ಹೋಗಿ ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ಆದರೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಘಟನೆ ನಾಲ್ಕೈದು ತಿಂಗಳ ಹಿಂದೆ ನಡೆದಿದೆ. ಆದರೆ ವಾರದ ಹಿಂದೆ ವಿದ್ಯಾರ್ಥಿಯೋರ್ವನು ಈ ಲಿಪ್ ಲಾಕ್ ವೀಡಿಯೋವನ್ನು ಕಾಲೇಜು ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಶೇರ್ ಮಾಡಿದ್ದಾನೆ. ಇದರಿಂದ ಎಚ್ಚೆತ್ತ ಪ್ರಾಧ್ಯಾಪಕರು ಈ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ತಕ್ಷಣ ಪ್ರಾಂಶುಪಾಲರು ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಿದ್ದಾರೆ ಎಂದು ತನಿಖೆಯ ಸಂದರ್ಭ ತಿಳಿದು ಬಂದಿದೆ ಎಂದು ಪೊಲೀಸ್ ಕಮಿಷನರ್ ಹೇಳಿದರು.
ಈ ಕೃತ್ಯದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳಿಬ್ಬರು ಕಾಲೇಜು ಸಮೀಪದಲ್ಲಿಯೇ ಇರುವ ಅಪಾರ್ಟ್‌ಮೆಂಟ್ ನಲ್ಲಿದ್ದರು. ಈ ಅಪಾರ್ಟ್‌ಮೆಂಟ್ ನಲ್ಲಿಯೇ ಕೃತ್ಯ ನಡೆದಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಅಪಾರ್ಟ್‌ಮೆಂಟ್ ಮಾಲೀಕರು ಇದೀಗ ಈ ವಿದ್ಯಾರ್ಥಿಗಳು ಮದ್ಯಪಾನ ಮಾಡುತ್ತಾರೆಂದು ಹೊರಗೆ ಹಾಕಿದ್ದಾರೆ. ಕೃತ್ಯದ ವಿಚಾರದಲ್ಲಿ ಎಲ್ಲರನ್ನೂ ವಿಚಾರಣೆ ಮಾಡಲಾಗಿದೆ. ಆದರೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ವಿದ್ಯಾರ್ಥಿನಿಯರು ಅಪ್ರಾಪ್ತರೇ ಎಂದು ಪರಿಶೀಲನೆ ನಡೆಸಿ ಪೊಕ್ಸೋ ಪ್ರಕರಣ ದಾಖಲು ಮಾಡುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.
ವಿಡಿಯೋ ಶೇರ್ ಮಾಡಿದ್ರೆ ಕಠಿಣ ಕ್ರಮ: ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಜಾಲತಾಣಗಳಲ್ಲಿ ಶೇರ್‌ಮಾಡಲಾಗುತ್ತಿದ್ದು, ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.