ಸಮಗ್ರ ನ್ಯೂಸ್: ಇದೊಂದು ಮನ ಮಿಡಿಯುವ ದೃಶ್ಯ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಕಂಡು ಮನನೊಂದು ಈ ಪರಿ ಬೇಡುತ್ತಿದ್ದೇನೆ.
ಮಡಿಕೇರಿ ಮೂಲದ ರವಿ ಎಂಬವರು ಕಳೆದ ಹತ್ತು ವರ್ಷಗಳಿಂದ ದ.ಕ ಜಿಲ್ಲೆಯ ಸುಳ್ಯದ ಪೈಚಾರು ಬಳಿ ಬಾಡಿಗೆ ಮನೆಯಲ್ಲಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ನೆಮ್ಮದಿಯ ಜೀವನವನ್ನು ನಡೆಸಿ ಆ ಬಡ ಕುಟುಂಬಕ್ಕೆ ಆಸರೆಯಾಗಿದ್ದರು.
ಕಳೆದ ಕೆಲವು ವರ್ಷಗಳಿಂದ ತನ್ನ ಮನೆಯನ್ನು ಜಯನಗರದ ಬಾಡಿಗೆ ಮನೆಯೊಂದಕ್ಕೆ ಬದಲಾಯಿಸಿ ಸುಳ್ಯ ಪರಿಸರದಲ್ಲಿ ಕೂಲಿ ಕಾರ್ಮಿಕನಾಗಿ, ಕೆಂಪು ಕಲ್ಲು ಕಟ್ಟುವ ಕಟ್ಟಡ ಕಾರ್ಮಿಕರಾಗಿ ದುಡಿದು ತನ್ನ ಪುಟ್ಟು ಕುಟುಂಬವನ್ನು ಸಂತೋಷದಿಂದ ಸಾಗಿಸುತ್ತಿದ್ದರು.
ವಿಧಿಯಾಟವೇನೋ ಎಂಬಂತೆ ಕಳೆದ ಮೂರು ತಿಂಗಳ ಹಿಂದೆ ಬೆಳಿಗ್ಗೆ ತನ್ನ ಮನೆಯಿಂದ ಕೂಲಿ ಕೆಲಸಕ್ಕೆ ಎಂದು ಹೋದ ರವಿಯವರನ್ನು ಸಂಜೆಯ ವೇಳೆ ಅವರು ಕೆಲಸ ಮಾಡುತ್ತಿದ್ದ ಮನೆಯವರು ಆಟೋದಲ್ಲಿ ಕರೆತಂದು ಮುದ್ದು ಮಕ್ಕಳ ಎದುರಿನಲ್ಲಿ ಅವರ ರೂಮಿನ ಒಂದು ಮೂಲೆಯಲ್ಲಿ ಚಾಪೆ ಹಾಕಿ ಮಲಗಿಸಿ ಹೋದರು.
ಅಷ್ಟೊತ್ತಿಗಾಗಲೇ ಹೋಟೆಲ್ ಕೆಲಸಕ್ಕೆಂದು ಹೋಗಿದ್ದ ರವಿ ಅವರ ಪತ್ನಿ ಚಂದ್ರಾವತಿ ಮನೆಗೆ ಬಂದಾಗ ಪ್ರೀತಿಯ ಅಪ್ಪನ ಎದುರು ಎರಡು ಮುದ್ದು ಮಕ್ಕಳು ಕಣ್ಣೀರಿಡುತ್ತಾ ಕುಳಿತಿದ್ದನ್ನು ಕಂಡ ತಾಯಿ ಪತಿ ರವಿಯವರ ಬಳಿ ವಿಚಾರಿಸಿದಾಗ ಕೆಲಸ ಮಾಡುತ್ತಿದ್ದ ಸಂದರ್ಭ ಆಯ ತಪ್ಪಿಕೆಳಗೆ ಬಿದ್ದು ಸೊಂಟ ಮುರಿದುಕೊಂಡ ಬಗ್ಗೆ ಹೇಳಿದ್ದಾರೆ.
ಕೂಡಲೇ ಸ್ಥಳೀಯರ ಸಹಕಾರದಿಂದ ಸುಳ್ಯ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಷ್ಟೊತ್ತಿಗಾಗಲೇ ಆ ಬಡ ಜೀವ ರವಿಯವರ ಸೊಂಟದಿಂದ ಕೆಳಭಾಗ ಸಂಪೂರ್ಣವಾಗಿ ನಿರ್ಜೀವ ಸ್ಥಿತಿಗೆ ತಲುಪಿಯಾಗಿತ್ತು.
ತನ್ನ ಕೈ ಕಾಲುಗಳ ಶಕ್ತಿಯಿಂದ ದುಡಿದು ಅ ಪುಟ್ಟ ಬಡ ಕುಟುಂಬದ ಜೀವನ ನಿರ್ವಹಣೆ ನಡೆಸುತ್ತಿದ್ದ ಮನೆಯ ಆಧಾರಸ್ತಂಭವೇ ಮುರಿದುಬಿದ್ದಿತ್ತು.
ತುತ್ತು ಅನ್ನಕ್ಕಾಗಿ ಚಡಪಡಿಸುತ್ತಿದ್ದ ಆ ಬಡ ಕುಟುಂಬಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯಕೀಯ ವೆಚ್ಚವನ್ನು ಬರಿಸಲು ಸಾಧ್ಯವಾಗದೆ ಅಲ್ಪಸ್ವಲ್ಪ ಚಿಕಿತ್ಸೆಯ ಬಳಿಕ ಮತ್ತೆ ರವಿಯವರನ್ನು ಜಯನಗರ ಮನೆಗೆ ಕರೆತಂದು ಮಲಗಿಸಲಾಯಿತು.
ದಿನ ಕಳೆದಂತೆ ಅವರ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಗಮನಿಸಿದ ಪ್ರೀತಿಯ ಪತ್ನಿ ಚಂದ್ರಾವತಿ ತನ್ನ ಜೀವನದ ಸಂಗಾತಿ ತನ್ನ ಸರ್ವಸ್ವವೆಂದು ನಂಬಿದ ಪತಿಯನ್ನು ಮತ್ತೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸುತ್ತಾರೆ.
ಬೆಳಿಗ್ಗೆಯಿಂದ ಸಂಜೆಯವರೆಗೆ ಆಸ್ಪತ್ರೆಯಲ್ಲಿ ಸೊಂಟದಿಂದ ಕೆಳಗೆ ನಿರ್ಜೀವ ಸ್ಥಿತಿಯಲ್ಲಿರುವ ತನ್ನ ಪತಿಯ ಸೇವೆಯನ್ನು ಮಾಡಿ ಸಂಜೆ ಆರು ಗಂಟೆಯ ಬಳಿಕ ತಾನು ಕೆಲಸ ಮಾಡುತ್ತಿರುವ ಹೋಟೆಲ್ ಗೆ ತೆರಳಿ ರಾತ್ರಿ 11:30 ಗಂಟೆ ತನಕ ಮುಸುರೆಯನ್ನು ತಿಕ್ಕಿ ಅದರಿಂದ ಸಿಗುವ 300 ರೂಪಾಯಿಗಳಿಂದ ತನ್ನ ಪತಿಯ ಚಿಕಿತ್ಸಾ ವೆಚ್ಚ ಮತ್ತು ತನ್ನ ಮುದ್ದು ಮಕ್ಕಳಿಗೆ ತುತ್ತು ಅನ್ನವನ್ನು ನೀಡುವ ಕಣ್ಣೀರಿನ ಜೀವನವನ್ನು ನಡೆಸಿಕೊಂಡು ತಾನು ನಂಬಿದ ದೇವರ ಮೇಲೆ ಭಾರವನ್ನು ಇಟ್ಟು ಕಾಲ ಕಳೆಯುತ್ತಾರೆ.
ಅಷ್ಟೊತ್ತಿಗಾಗಲೇ ತಮ್ಮ ಆತ್ಮೀಯರೊಬ್ಬರು ತನ್ನ ಮುದ್ದು ಮಕ್ಕಳಲ್ಲಿ ಒಬ್ಬನಾದ ಆರನೇಯ ತರಗತಿಯ ವಿದ್ಯಾರ್ಥಿ ಯಕ್ಷಿತ್ ನನ್ನು ತಮ್ಮ ಮನೆಯಲ್ಲಿ ಇರಿಸಿ ಈ ಮಗುವನ್ನು ನಾವು ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡುತ್ತಾರೆ.
ಇದೀಗ ಅಮ್ಮನ ಜೊತೆಯಲ್ಲಿ ಆರು ವರ್ಷದ ಪುಟ್ಟ ಮಗಳು ಲಾಸ್ಯ ಇದ್ದು ಈ ಬಡ ಕುಟುಂಬ ಕತ್ತಲು ತುಂಬಿದ ಜಗತ್ತಿನಲ್ಲಿ ಬೆಳಕನ್ನು ಹುಡುಕಿ ಹೋಗುವಂತೆ ಇಂದು ತಮ್ಮ ಕುಟುಂಬದ ಕಷ್ಟಕ್ಕೆ ಸಹಾಯ ಹಸ್ತವನ್ನು ಚಾಚುತಿದೆ.
ರವಿಯವರ ಏಕ ಮಾತ್ರ ಹಿರಿಯ ಸಹೋದರ ಆರೋಗ್ಯ ಹದಗೆಟ್ಟು ಅವರು ಕೂಡ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಇವರ ಈ ಕಷ್ಟದ ಸ್ಥಿತಿಯಲ್ಲಿ ಊರಿನ ಸ್ಥಳೀಯರು ಇವರ ನೋವಿಗೆ ಸ್ಪಂದಿಸಿ ಅಲ್ಪಸ್ವಲ್ಪ ಸಹಾಯ ಹಸ್ತವನ್ನು ಮಾಡಿದರೆ ಇವರ ಸಮುದ್ರದಂತಹ ವಿಶಾಲವಾದ ಬಡತನವನ್ನು ನೀಗಿಸಲು ಕಷ್ಟ ಸಾಧ್ಯವಾಗಿದೆ.
ಆದ್ದರಿಂದ ಈ ನೋವಿನ ಬರವಣಿಗೆಯನ್ನು ವೀಕ್ಷಿಸಿರುವ ತಾವುಗಳು ಬಡ ಕುಟುಂಬಕ್ಕೆ ಸಹಾಯ ಹಸ್ತವನ್ನು ನೀಡುವಂತೆ ಲೇಖನದ ಮೂಲಕ ಬೇಡಿಕೊಳ್ಳುತ್ತಿದ್ದೇನೆ.
ಒಮ್ಮೆಯಾದರೂ ಈ ಬಡ ಜೀವವನ್ನು ಸಂಪರ್ಕಿಸಿ..8861457451
✍️ಹಸೈನಾರ್ ಜಯನಗರ