ಸಮಗ್ರ ನ್ಯೂಸ್: ಮಂಗಳೂರು ಮೂಲದ ಸಂಗೀತ ನಿರ್ದೇಶಕ ವನಿಲ್ ವೇಗಸ್ ರವರು ಸಂಗೀತ ಕ್ಷೇತ್ರದ ಅತ್ಯುನ್ನತ ಗ್ರ್ಯಾಮಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
ಬೆಂಗಳೂರಿನ ರಿಕ್ಕಿ ಕೇಜ್ ತಂಡದ ಮುಖ್ಯಸ್ಥರಾಗಿರುವ ವನಿಲ್, ರಿಕ್ಕಿ ಕೇಜ್- ಸ್ಟೂವರ್ಟ್ ಕೋಪ್ಲಾಂಡ್ ನಿರ್ಮಿತ “ಡಿವೈನ್ ಟೈಡ್ಸ್” ಆಲ್ಬಂಗೆ ಇಂಜಿನೀಯರಿಂಗ್ ಮತ್ತು ಮಿಕ್ಸಿಂಗ್ ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದರು.
ಅದೇ ವಿಭಾಗದಲ್ಲಿ ಈಗ ಜಗತ್ತಿನಲ್ಲಿಯೇ ಸಂಗೀತ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದು ಕರ್ನಾಟಕದ ಎರಡನೇ ಗ್ರ್ಯಾಮಿ ವಿಜೇತರೆಂಬ ಖ್ಯಾತಿಯನ್ನು ಪಡೆದಿದ್ದಾರೆ. 64 ವರ್ಷಗಳ ಗ್ರ್ಯಾಮಿ ಇತಿಹಾಸದಲ್ಲಿ ಮಂಗಳೂರಿಗೆ ಇದು ಮೊತ್ತ ಮೊದಲನೆಯ ಗ್ರ್ಯಾಮಿ ಪ್ರಶಸ್ತಿ!
ಬೆಸ್ಟ್ ನ್ಯೂ ಏಜ್ ವಿಭಾಗದಲ್ಲಿ ಡಿವೈನ್ ಟೈಡ್ಸ್ ಆಲ್ಬಂಗೆ ಈ ಪ್ರಶಸ್ತಿಯನ್ನು 2೦22 ಏಪ್ರಿಲ್ 4 ರಂದು ಅಮೆರಿಕಾದ ಲಾಸ್ ವೇಗಸ್ ನಲ್ಲಿ ನೀಡಲಾಯಿತು. ಆಲ್ಬಮ್ ನಿರ್ಮಾಪಕರಾದ ರಿಕ್ಕಿ ಕೀಜ್, ಸ್ಟೂವರ್ಟ್ ಕೋಪ್ಲಾಂಡ್, ಲೋನಿ ಪಾರ್ಕ್, ತಾಂತ್ರಿಕ ವಿಭಾಗದಲ್ಲಿ ಮಂಗಳೂರಿನ ವನಿಲ್ ವೇಗಸ್ ಹಾಗೂ ಮುಂಬೈ ಮೂಲದ ಪಿ ಎ ದೀಪಕ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಂಗಳೂರಿನ ಉಳ್ಳಾಲದಲ್ಲಿ ಹುಟ್ಟಿ ಬೆಳೆದಿರುವ ವನಿಲ್, ಸರಿ ಸುಮಾರು 2೦೦೦ ಇಸವಿಯಲ್ಲಿ ಸಂಗೀತ ಕ್ಷೇತ್ರಕ್ಕೆ ಕಾಲಿರಸಿದ್ದು, ಮಂಗಳೂರಿನ ಬಹುತೇಕ ಸಂಗೀತ ತಂಡಗಳೊಂದಿಗೆ ಕೀಬೋರ್ಡ್ ವಾದಕರಾಗಿ ಕೆಲಸ ನಿರ್ವಹಿಸಿದ್ದರು.
2೦೦7 ರಲ್ಲಿ ಬೆಂಗಳೂರು ಸೇರಿದ್ದ ವನಿಲ್ ರಿಕ್ಕಿ ಕೇಜ್ ತಂಡವನ್ನು ಸೇರಿದ್ದು, ಬಹಳಷ್ಟು ಸಿನೆಮಾ ಹಾಡುಗಳು, 3೦೦೦ ಕ್ಕೂ ಹೆಚ್ಚು ಜಾಹೀರಾತುಗಳು, 16 ಸ್ಟುಡಿಯೋ ಆಲ್ಬಂಗಳಲ್ಲಿ ಕೆಲಸ ಮಾಡಿದ್ದಾರೆ. ಇದರಲ್ಲಿ 3 ಗ್ರ್ಯಾಮಿ ಪ್ರಶಸ್ತಿ ವಿಜೇತ ಆಲ್ಬಂಗಳೂ ಸೇರಿವೆ. ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಕರ್ನಾಟಕದ ವನ್ಯಜೀವಿ ಆಧಾರಿತ ಸಾಕ್ಷಾಚಿತ್ರ “ವೈಲ್ಡ್ ಕರ್ನಾಟಕ” ಇದರ ಹಿನ್ನೆಲೆ ಸಂಗೀತದಲ್ಲಿ ವನಿಲ್ ಪ್ರಮುಖ ಪಾತ್ರ ವಹಿಸಿದ್ದರು.
ಡಿವೈನ್ ಟೈಡ್ಸ್ ಆಲ್ಬಂಗಾಗಿ ರಿಕ್ಕಿ ಕೇಜ್ – ಸ್ಟೂವರ್ಟ್ ಕೋಪ್ಲಾಂಡ್ ಜೊತೆ ವನಿಲ್ ಬಹಳಷ್ಟು ಶ್ರಮ ವಹಿಸಿದ್ದರು. ಇದರ ಫಲವಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.