ಸಮಗ್ರ ನ್ಯೂಸ್: ರಾಜ್ಯಾದ್ಯಂತ ಮಳೆರಾಯನ ಆರ್ಭಟ ಮುಂದುವರಿದಿದೆ. ಮಡಿಕೇರಿ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಪರಿಣಾಮ ಬೀರಿದ್ದು, ನಿನ್ನೆ ಭಾರೀ ಶಬ್ದವೊಂದು ಕೇಳಿಸಿದ ನಂತರ ಭೂಕುಸಿತ ಉಂಟಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಭೂಕುಸಿತ ಉಂಟಾಗಿದ್ದು, ಸುಮಾರು ಐದು ಎಕರೆಯಷ್ಟು ಭೂಮಿ ಕೊಚ್ಚಿ ಬಂದಿದೆ.
ನಿಶಾನಿ ಬೆಟ್ಟದ ಮೇಲ್ಭಾಗದಿಂದ ಕಲ್ಲುಗಳು, ಮಣ್ಣು, ಮರಗಳು ಕೊಚ್ಚಿ ಬರುತ್ತಿವೆ. ಭೂಕುಸಿತಕ್ಕೂ ಮೊದಲು ಭಾರೀ ಶಬ್ಧವೊಂದು ಕೇಳಿಸಿದೆ. ಇದರಿಂದಾಗಿ ಜನರು ಭಯಭೀತರಾಗಿದ್ದರು. ಸದ್ಯ ಭೂ ಕುಸಿತ ವ್ಯಾಪ್ತಿಯಿಂದ ಜನರು ದೂರ ಹೋಗಿದ್ದಾರೆ ಎಂದು ತಿಳಿದುಬಂದಿದೆ.