ಸುಳ್ಯ : ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮತ್ತು ಶ್ರೀ ಪಂಚಲಿಂಗೇಶ್ವರನಿಗೆ ಪೂಗಮನ ಕಲ್ಪವೃಕ್ಷ ಸೇವೆ ಸಮಿತಿಯ, ಜಂಟಿ ಐತಿಹಾಸಿಕ ಯೋಜನೆಯ ಪ್ರಯುಕ್ತ ” ವಿಜ್ಞಾಪನಾ ಪತ್ರ” ಬಿಡುಗಡೆಯ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಪತ್ರದ ಬಿಡುಗಡೆಯನ್ನು ಪೂಗಮನ ಸಮಿತಿಯ ಅಧ್ಯಕ್ಷರಾದ ಶ್ರೀ ದಾಸಪ್ಪ ಗೌಡ ಕೋಡ್ತಿಲು ನೆರವೇರಿಸಿದರು. ಸಮಿತಿಯ ಸಂಯೋಜಕರಾದ ಶ್ರೀ ಕೃಷ್ಣ ಪ್ರಸಾದ್ ಮಡ್ತಿಲ, ಕಾರ್ಯ ಯೋಜನೆಯ ಪೂರ್ವ ತಯಾರಿಯ ಬಗ್ಗೆ ಮಾತನಾಡಿ, ಊರ ಸಮಸ್ತರು ಭಕ್ತಿಪೂರ್ವಕವಾಗಿ ತನು-ಮನ-ಧನಗಳ ಪೂರ್ವಕ ಈ ಕಾರ್ಯ ಯೋಜನೆಯಲ್ಲಿ ಭಾಗವಹಿಸ ಬೇಕೆಂದು ವಿನಂತಿಸಿದರು.
ಸಮಿತಿಯ ಗೌರವಾಧ್ಯಕ್ಷ ಶ್ರೀ ಎಸ್.ಎನ್. ಮನ್ಮಥ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ಶ್ರೀನಿವಾಸ ಮಡ್ತಿಲ, ಪೂಗಮನ ಸಮಿತಿಯ ಅಧ್ಯಕ್ಷ ಶ್ರೀ ದಾಸಪ್ಪ ಗೌಡ ಕೋಡ್ತಿಲು ಮತ್ತು ಪಂಚಾಯತ್ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಕೀಲಾಡಿ ಈ ಕಾರ್ಯ ಯೋಜನೆಯ ಯಶಸ್ಸಿಗಾಗಿ ಊರ ಸಮಸ್ತರ ಸಹಕಾರವನ್ನು ಕೋರಿದರು.
ಊರಿನ ಸಮಸ್ತರ ಪರವಾಗಿ ಬರೆಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿನಿ ಮಹಾಕಾಳಿ ಕ್ಷೇತ್ರದ ‘ ಧರ್ಮರಸು ‘ ಬರೆಮೇಲು ಕರುಣಾಕರ ಗೌಡ ಸಮಸ್ತ ಊರ ಭಕ್ತಾದಿಗಳಿಂದ ಸಹಕಾರವನ್ನು ಕೋರಿ ‘ಶ್ರೀ ಕ್ಷೇತ್ರ ಬರೆಮೇಲಿನ’ ವತಿಯಿಂದ ಪ್ರಥಮ ವಾಗ್ದಾನವಾಗಿ 30,555 ಸಾವಿರವನ್ನು ಘೋಷಿಸಿದರು.
ಸಭೆಯಲ್ಲಿ ಗೌರವಾನ್ವಿತ ಸಲಹಾ ಸಮಿತಿಯ ಸದಸ್ಯರು, ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.