ಸಮಗ್ರ ನ್ಯೂಸ್: ಎರಡು ದಿನಗಳಿಂದ ಕೊಂಚ ವಿರಾಮ ನೀಡಿದ್ದ ವರುಣ ಮತ್ತೆ ಅಬ್ಬರಿಸುತ್ತಿದ್ದಾನೆ. ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಳೆಯ ಸಿಂಚನ ಆಗಲಿದೆ. ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎಂದಿನಂತೆ ಮಳೆ ಮುಂದುವರಿಯಲಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೂ ಮೋಡ ಮತ್ತು ಸೂರ್ಯನ ನಡುವೆ ಕಣ್ಣಾಮುಚ್ಚಾಲೆಯ ಆಟ ಇರಲಿದ್ದು, ಚದುರಿದ ರೀತಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಮಳೆ ಬೀಳುತ್ತಿದ್ದು ಬೆಳಗಾವಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬೆಳಗಾವಿಯ ಸಪ್ತನದಿಗಳು ತುಂಬಿ ಹರಿಯುತ್ತಿವೆ. ಮತ್ತೊಂದು ಕಡೆ ಕಾವೇರಿ ಸೇರಿದಂತೆ ಉಪ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಚಿಕ್ಕಮಗಳೂರು, ಹಾಸನ, ಮಂಗಳೂರು ಭಾಗದ ಘಟ್ಟ ಪ್ರದೇಶಗಳಲ್ಲಿ ಭೂಕುಸಿತವಾಗುತ್ತಿರುವ ವರದಿಗಳು ಬರುತ್ತಿವೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದ್ದು, ಹಲವೆಡೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೊಪ್ಪ, ಮೂಡಿಗೆರೆ, ಶೃಂಗೇರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬಿ.ಇ.ಓ. ರಜೆ ಘೋಷಣೆ ಮಾಡಿದ್ದಾರೆ.
ಮೂಡಿಗೆರೆ ತಾಲೂಕು ಬಿಳ್ಳೂರು ಸಮೀಪ ಮರ ಕುಸಿದು ಬಿದ್ದ ಪರಿಣಾಮ ಕಾಲೇಜುಗಳಿಗೆ ಬರಲಾರದೇ ವಿದ್ಯಾರ್ಥಿಗಳು ಪರದಾಡಿದ ಘಟನೆ ನಡೆದಿದೆ.
ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕಿನಲ್ಲಿ ಭಾರೀ ಮಳೆ. ಮೂಡಿಗೆರೆ ತಾಲೂಕಿನ ದೇವರ ಮನೆಯಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 350 ಮಿಲಿ ಮೀಟರ್ ಮಳೆ. ಬೈದುವಳ್ಳಿ ಗ್ರಾಮದಲ್ಲಿ ರಸ್ತೆ ಮೇಲೆ ನುಗ್ಗುತ್ತಿರುವ ನೀರು. ಕಳಸ ತಾಲೂಕಿನ ಬಲಿಗೆ ಬಳಿ ಭೂಕುಸಿತಗೊಂಡು ರಸ್ತೆಯತ್ತ ಬೃಹತ್ ಬಂಡೆಗಳು ಬೀಳುತ್ತಿವೆ. ಹೊರನಾಡು-ಬಲಿಗೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ಭೂಕುಸಿತ ಉಂಟಾಗಿದೆ.
ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಶಿವಮೊಗ್ಗದ ಭದ್ರಾವತಿ ನಗರದಲ್ಲಿರುವ ಹೊಸ ಸೇತುವೆ ಮುಳುಗಡೆಯಾಗಿದೆ.
ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಬಿಟ್ಟುಬಿಡದೆ ಮಳೆಯಾಗುತ್ತಿದ್ದು, ಭದ್ರಾವತಿ ಓಲ್ಡ್ ಟೌನ್ ಮತ್ತು ಸಿದ್ದಾರೂಢ ನಗರಕ್ಕೆ ಸಂಪರ್ಕ ಕಲ್ಪಿಸುವ ಭದ್ರಾವತಿ ಬಸ್ ನಿಲ್ದಾಣ ಸಮೀಪದ ಹೊಸ ಸೇತುವೆ ಮುಳುಗಡೆಯಾಗಿದೆ.
ಇನ್ನು ಮಲೆನಾಡು- ಕರಾವಳಿ ಸಂಪರ್ಕಿಸುವ ಶಿರಾಡಿ ಘಾಟ್ ನ ದೋಣಿಗಲ್ ಬಳಿ ಭೂಕುಸಿತವಾಗಿದ್ದ ಸಂಚಾರ ನಿಷೇಧಿಸಿ ಹಾಸನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸಿಎಂ ತುರ್ತುಸಭೆ:
ರಾಜ್ಯದಲ್ಲಿ ಅತಿಯಾಗಿ ಸುರಿಯುತ್ತಿರುವ ಮಳೆಯಿಂದ ಅನೇಕ ಸಮಸ್ಯೆಗಳು ಸೃಷ್ಟಿಯಾಗಿವೆ. ಅಷ್ಟೇ ಅಲ್ಲದೆ, ಪ್ರಕೃತಿ ವಿಕೋಪದಿಂದ ಬೆಟ್ಟ ಗುಡ್ಡಗಳು ಧರೆಗುರುಳಿತ್ತಿವೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕನ ಮಾಡಲು ಅತಿವೃಷ್ಠಿಯಿಂದ ಹಾನಿಗೊಳಗಾದ ಜಿಲ್ಲೆಗಳ ಅಧಿಕಾರಿಗಳ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ಕರೆದಿದ್ದಾರೆ.