ಸಮಗ್ರ ನ್ಯೂಸ್: ಒಂದೇ ಕುಟುಂಬದ ಮೂವರು ಸಮುದ್ರ ಪಾಲಾಗಿರುವ ಘಟನೆ ಒಮಾನ್ ಕರಾವಳಿ ತೀರದಲ್ಲಿ ನಡೆದಿದೆ. ಕೊಚ್ಚಿಹೋದ ಮೂವರು ಭಾರತೀಯ ಮೂಲದವರೆಂದು ತಿಳಿದುಬಂದಿದೆ. ರಜೆಯನ್ನು ಆನಂದವಾಗಿ ಕಳೆಯಲು ಹೋಗಿದ್ದ ಕುಟುಂಬಕ್ಕೀಗ ಬರಸಿಡಿಲು ಬಡಿದಂತಾಗಿದೆ.
ಪತಿ ತನ್ನ ಮಕ್ಕಳನ್ನು ಕಳೆದುಕೊಂಡ ಮಹಿಳೆಯ ಆಕ್ರಂದನ ಮುಗಿಲು ಮುಟ್ಟಿತ್ತು. ದೈತ್ಯಾಕಾರ ಅಲೆಗಳಿಗೆ ಕೊಚ್ಚಿಹೋಗಿದ್ದ ತಂದೆ-ಮಗನ ಮೃತದೇಹ ಪತ್ತೆಯಾಗಿದ್ದು, ಬಾಲಕಿ ಕಣ್ಮರೆಯಾಗಿದ್ದಾಳೆ. ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳು ಬಾಲಕಿ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಶಶಿಕಾಂತ್ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು 20 ವರ್ಷಗಳಿಂದ ಶಶಿಕಾಂತ್ ದುಬೈನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ದುಬೈ ಮೂಲದ ಕಂಪನಿಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಆತ, ಬಕ್ರೀದ್ ಹಬ್ಬದ ರಜೆಯಿಂದಾಗಿ ಪತ್ನಿ ಸಾರಿಕಾ ಹಾಗೂ ಮೂವರು ಮಕ್ಕಳೊಂದಿಗೆ ಓಮನ್ ಸಮುದ್ರ ತೀರಕ್ಕೆ ತೆರಳಿದ್ದರು.
ರಕ್ಕಸ ಅಲೆಗಳಲ್ಲಿ ಶ್ರುತಿ ಮತ್ತು ಶ್ರೇಯಸ್ ಕೊಚ್ಚಿ ಹೋಗಿದ್ದಾರೆ. ತನ್ನ ಕಣ್ಣೆದುರೇ ಮಗಳು ಮತ್ತು ಮಗ ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ತಂದೆ ಅವರನ್ನು ರಕ್ಷಿಸಲು ಹೋಗಿದ್ದಾರೆ. ದುರಾದೃಷ್ಟವಶಾತ್ ಅಲೆಗಳ ರಭಸಕ್ಕೆ ಶಶಿಕಾಂತ್ ಕೂಡ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ದಡದಲ್ಲಿದ್ದ ಪತ್ನಿ ಮತ್ತು ಇನ್ನೊಬ್ಬ ಮಗಳು ಮಾತ್ರ ಸುರಕ್ಷಿತವಾಗಿದ್ದಾರೆಂದು ಶಶಿಕಾಂತ್ ಸಹೋದರ ರಾಜ್ ಕುಮಾರ್ ಖಚಿತಪಡಿಸಿದ್ದಾರೆ.