ಸಮಗ್ರ ನ್ಯೂಸ್: ಕರಾವಳಿ ಹಾಗೂ ಬೆಂಗಳೂರು ಸಂಪರ್ಕ ಕೊಂಡಿಯಂತಿರುವ ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಶಿರಾಡಿಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಹಾಸನ ಎಸ್‌ಪಿ ಜೈರಾಂ ಶಂಕರ್ ಅವರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ಭೂ ಕುಸಿತ ಉಂಟಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದ್ದು, ಸಂಚಾರಕ್ಕೆ ಅಪಾಯವನ್ನು ತಂದೊಡ್ಡಿದೆ. ಜೊತೆಗೆ ಕಳೆದ ಹತ್ತಕ್ಕೂ ಅಧಿಕ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಶಿರಾಡಿಘಾಟ್ ರಸ್ತೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇಂದೂ ಕೂಡ ಮತ್ತೆ ಭೂ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹಾಸನ ಜಿಲ್ಲಾಡಳಿತ ಶಿರಾಡಿಘಾಟ್ ರಸ್ತೆಯಲ್ಲಿ ಬಾರೀ ವಾಹನಗಳ ಸಂಚಾರಕ್ಕೆ ನಿಷೇಧವನ್ನು ಹೇರಿದ್ದು, ಲಘು ವಾಹನ ಹಾಗೂ ಬಸ್ಸುಗಳ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಿತ್ತು. ಆದರೆ ಮಲೆನಾಡಿನ ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭೂಕುಸಿತದ ಭೀತಿ ಉಂಟಾಗಿದೆ. ಇದೀಗ ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚಾರ ಮಾಡುವಂತೆ ಮನವಿ ಮಾಡಲಾಗಿದೆ.
ಪರಿಣಾಮ ಮಂಗಳೂರಿಗೆ ಹೋಗುವ ಎಲ್ಲಾ ವಾಹನಗಳು ಬೇಲೂರು ಮೂಡಿಗೆರೆ ಮಾರ್ಗವಾಗಿ ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ಚಲಿಸಬೇಕು ಎಂದು ಹಾಸನ ಪೊಲೀಸರು ಪ್ರಕಟಣೆ ನೀಡಿದ್ದಾರೆ.
ಕೊಟ್ಟಿಗೆಹಾರ, ಮೂಡಿಗೆರೆ, ಹಾನ್ಬಾಲ್, ಬೇಲೂರು, ಹಾಸನ ಮಾರ್ಗವಾಗಿ ಬೆಂಗಳೂರು ಸಂಚಾರ ಮಾಡುವುದಕ್ಕೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.