ನವದೆಹಲಿ: ನೂರು ವರ್ಷಗಳ ಇತಿಹಾಸವುಳ್ಳ ಸಂಸತ್ ಭವನ ಶೀಘ್ರವೇ ಇತಿಹಾಸದ ಪುಟಗಳನ್ನು ಸೇರಲಿದೆ. ಮಳೆಗಾಲದ ಸಂಸತ್ ಅಧಿವೇಶನ ನಡೆಯಲಿದ್ದು, ಇದೇ ಕೊನೆಯ ಅಧಿವೇಶನ ಆಗಲಿದೆ.
ಸೋಮವಾರದಿಂದ ಮಳೆಗಾಲದ ಸಂಸತ್ ಅಧಿವೇಶನ ಪ್ರಾರಂಭವಾಗುತ್ತಿದೆ. ಬಳಿಕ ಡಿಸೆಂಬರ್‌ನಲ್ಲಿ ನಡೆಯುವ ಚಳಿಗಾಲದ ಅಧಿವೇಶನವನ್ನು ಸೆಂಟ್ರಲ್ ವಿಸ್ತಾರ ಭಾಗವಾಗಿ ಮೋದಿ ಸರ್ಕಾರ ನಿರ್ಮಿಸುತ್ತಿರುವ ನೂತನ ಸಂಸತ್ ಭವನದಲ್ಲಿ ನಡೆಸುವುದಾಗಿ ಈಗಾಗಲೇ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಘೋಷಿಸಿದ್ದಾರೆ.
ಹಾಲಿ ಸಂಸತ್ ಭವನದಲ್ಲಿಯೇ ನೂತನ ರಾಷ್ಟ್ರಪತಿ ಚುನಾವಣೆ ಜುಲೈ 19 ರಂದು ನಡೆಯಲಿದೆ. ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆಯೂ ಇಲ್ಲಿಯೇ ನಡೆಯಲಿದೆ.
ಹಾಲಿ ಸಂಸತ್ ಭವನದ ನಿರ್ಮಾಣವನ್ನು 1921ರಲ್ಲಿ ಶುರು ಮಾಡಿ, 1927ರಲ್ಲಿ ಪೂರ್ಣಗೊಳಿಸಲಾಗಿತ್ತು. ಎಡ್ವಿನ್ ಲೂಟಿನ್ಸ್ ಮತ್ತು ಹೆರ್ಬೆಟ್ ಬೇಕರ್ ಎಂಬ ಆರ್ಕಿಟೆಕ್ಟ್‌ಗಳು ಇದರ ನಿರ್ಮಾಣದ ಹೊಣೆ ಹೊತ್ತಿದ್ದರು.
ಡಿಸೆಂಬರ್ 10ರಂದು ಸೆಂಟ್ರಲ್ ವಿಸ್ತಾರ ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದರು. ಈಗಿರುವ ಸಂಸತ್ ಭವನವನ್ನು ನಿರ್ಮಿಸಿದ್ದು ಬ್ರಿಟೀಷರು. 1921ರಲ್ಲಿ ಭೂಮಿಪೂಜೆ ನೆರವೇರಿಸಿ, 1927ಕ್ಕೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿತ್ತು.
ಆಗ ಇದಕ್ಕೆ 83 ಲಕ್ಷ ರೂಪಾಯಿ ವೆಚ್ಚ ಆಗಿತ್ತು. ಇನ್ನು ಹೊಸ ಸಂಸತ್ ಭವನ ಸುಮಾರು 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.