ನವದೆಹಲಿ.ಮೇ.23: ಕಿರಿಯ ಕುಸ್ತಿಪಟು ಸಾಗರ್ ರಾಣಾ ಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಒಲಿಂಪಿಯನ್ ಹಿರಿಯ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.ಸುಶೀಲ್ ಕುಮಾರ್ ಪಂಜಾಬ್ ನಲ್ಲಿರುವ ಸುಳಿವು ಪಡೆದುಕೊಂಡ ದೆಹಲಿ ಪೊಲೀಸರು, ಹಿರಿಯ ಕುಸ್ತಿಪಟು ಹಾಗೂ ಆತನ ಮತ್ತೊಬ್ಬ ಶಂಕಿತ ಸಹಚರ ಅಜಯ್ ಕುಮಾರ್ ಎಂಬುವವರನ್ನು ಬಂಧಿಸಿದ್ದಾರೆ. ಸಾಗರ್ ರಾಣಾ ಕೊಲೆ ಪ್ರಕರಣದ ತನಿಖೆಗಾಗಿ ಪೊಲೀಸರು ಅವರನ್ನು ಟ್ರಾನ್ಸಿಟ್ ವಾರೆಂಟ್ ಪಡೆದು ದೆಹಲಿಗೆ ಕರೆದೊಯ್ದಿದ್ದಾರೆ.ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಮೇ 4 ರಂದು ಸಾಗರ್ ರಾಣಾ ಕೊಲೆಯಾಗಿದ್ದರು. ಸುಶೀಲ್ ಹಾಗೂ ಸಾಗರ್ ನಡುವಣ ಘರ್ಷಣೆಯಲ್ಲಿ ಸಾಗರ್ ಹತ್ಯೆಗೀಡಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಅಂದಿನಿಂದ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ನನ್ನು ಬಂಧಿಸಲು ಪೊಲೀಸರು ತೀವ್ರ ಪ್ರಯತ್ನ ನಡೆಸಿದ್ದರು.ಕುಸ್ತಿಪಟು ಸುಶೀಲ್ ಕುಮಾರ್ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ, ಆತನ ಸಹಚರ ಅಜಯ್ ಬಗ್ಗೆ ಮಾಹಿತಿ ನೀಡಿದವರಿಗೆ 50,000 ರೂ ಬಹುಮಾನ ಘೋಷಿಸಿದ್ದರು.ಮತ್ತೊಂದು ಕಡೆ ಕಳೆದ ವಾರ ಸುಶೀಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿಯ ರೋಹಿಣಿ ನ್ಯಾಯಾಲಯ ವಜಾಗೊಳಿಸಿತ್ತು. ತಲೆಮರೆಸಿಕೊಂಡಿದ್ದ ಸುಶೀಲ್ ಎರಡು ದಿನಗಳ ಹಿಂದೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದಾಗ ಮೀರತ್ ಟೋಲ್ ಪ್ಲಾಜಾದಲ್ಲಿದ್ದ ಕ್ಯಾಮೆರಾಗಳು ಸೆರೆಯಿಡಿದಿದ್ದವು, ಈ ಪೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇದರ ಆಧಾರದ ಮೇಲೆ ದೆಹಲಿ ಪೊಲೀಸರು ಸುಶೀಲ್ ಅವರ ಶೋಧನೆ ಮುಂದುವರೆಸಿ, ಅಂತಿಮವಾಗಿ ಆತನನ್ನು ಪಂಜಾಬ್ ನಲ್ಲಿ ಬಂಧಿಸಿದ್ದಾರೆ.