ಸಮಗ್ರ ನ್ಯೂಸ್: ತೀವ್ರ ಆತಂಕಕ್ಕೆ ಕಾರಣವಾಗಿರುವ ಕಾಣಿಯೂರಿನ ಬೈತಡ್ಕ ಸೇತುವೆಯಲ್ಲಿ ಜ.10ರ ಮಧ್ಯರಾತ್ರಿ 12 ಕ್ಕೆ ಕಾರು ನದಿಗೆ ಬಿದ್ದು ನಾಪತ್ತೆಯಾದ ಘಟನೆಯಲ್ಲಿ ಕಾಣೆಯಾದದವರ ವಿವರ 40 ಗಂಟೆ ಕಳೆದರೂ ಇನ್ನೂ ಲಭ್ಯವಾಗಿಲ್ಲ.
ಈ ನಡುವೆ ಬೈತ್ತಡ್ಕದಲ್ಲಿ ಕಾರು ಅಪಘಾತವಾಗಿ ಸೇತುವೆಯ ತುಂಡಾದ ತಡೆಬೇಲಿ ಅಪಾಯ ಆಹ್ವಾನಿಸುತ್ತಿದೆ. ತುಂಡಾದ ಕಬ್ಬಿಣದ ರಾಡ್ ಗಳು ಹಾಗೆ ಬಿಟ್ಟಿದ್ದಾರೆ. ಇಲಾಖೆ ಯಾವೂದೇ ತಡೆಬೇಲಿಯೂ ಹಾಕುವ ಕಾರ್ಯವೂ ಮಾಡಿಲ್ಲ. ಇದರಿಂದ ಇನ್ನಷ್ಟು ಅವಘಡಗಳು ಸಂಭವಿಸುವ ಸಾಧ್ಯತೆ ಇದೆ.
ಜ.10ರ ಮಧ್ಯರಾತ್ರಿ 12 ಗಂಟೆ ಸಮಯಕ್ಕೆ ಕಾರೊಂದು ವೇಗವಾಗಿ ಬಂದು ನದಿಗೆ ಬಿತ್ತು. ಬೆಳಿಗ್ಗೆ ವಿಷಯ ಹಬ್ಬಿ ಹಲವು ಗಂಟೆ ಕಾರ್ಯಚರಣೆಯ ನಂತರ ಕಾರು ಮೇಲಕ್ಕೆತ್ತಲಾಯಿತಾದರೂ ಕಾರಲ್ಲಿದ್ದವರು ಪತ್ತೆಯಾಗಿಲ್ಲ.
ವಿಟ್ಲ ಕುಂಡಡ್ಕ ನಿವಾಸಿ ಧನುಷ್ ಮತ್ತು ಮಂಜೇಶ್ವರದ ಧನುಷ್ ಇಬ್ಬರು ಕಾರಲ್ಲಿದ್ದರು ಎನ್ನಲಾಗಿದೆ. ಇವರಿಬ್ಬರ ಕುರಿತು ವಿಟ್ಲ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿದೆ. ಸವಣೂರಿನಲ್ಲಿ ಪೊಲೀಸ್ ತಪಾಸಣೆಯ ಸಮಯ ಗುತ್ತಿಗಾರಿನ ಅಕ್ಕನ ಮನೆಗೆ ಹೋಗುತ್ತೇವೆ ಎಂದಿದ್ದರು ಎನ್ನಲಾಗಿದೆ.
ಧನುಷ್ ತಂದೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿ , ಮಗ 11.45 ಕ್ಕೆ ಕರೆ ಮಾಡಿ ಬರುವಾಗ ತಡವಾಗುತ್ತದೆ ಎಂದಿದ್ದ ಎಂದರು. ಧನುಷ್ ಮಾವ ಮಾತನಾಡಿ , 12 ಗಂಟೆಗೆ ಆಲಂಕಾರಿನಲ್ಲಿ ಕಾರಿಗೆ ಲಾರಿ ಡಿಕ್ಕಿಯಾಗಿದೆ ಎಂದಿದ್ದರು ಎಂದು ಗೊಂದಲದ ಹೇಳಿಕೆ ನೀಡಿದರು.
ಬೈತಡ್ಕದಲ್ಲಿ ಎನ್ ಡಿ ಆರ್ ಎಫ್ ಹಾಗೂ ಅಗ್ನಿಶಾಮಕ ದಳ ಹಾಗೂ ಊರಿನ ಸ್ಥಳೀಯರು ಹಲವು ಗಂಟೆ ಕಾರ್ಯಚರಣೆ ನಡೆಸಿ ಕಾರನ್ನು ಮೇಲಕ್ಕೆತ್ತಲಾಯಿತು . ಮೊದಲು ಕಾರ್ಯಚರಣೆ ನಡೆಸಿದ ಕೇಶವ ಬೈತಡ್ಕ ಅವರ ತಂಡಕ್ಕೆ ಕಾರು ಪತ್ತೆಯಾದರೂ ನೀರಿನ ರಭಸಕ್ಕೆ ಮುಂದಕ್ಕೆ ಚಲಿಸಿತ್ತು.
ಪತ್ತೆಯಾದ ಕಾರಲ್ಲಿ ಚಪ್ಪಲಿ, ಪೆಟ್ರೋಲ್ ಹಾಗೂ ಇತರ ಕೆಲವು ವಸ್ತುಗಳಷ್ಟೇ ಸಿಕ್ಕಿದವು. ಸಂಜೆ 6 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿದರೂ ನಾಪತ್ತೆಯಾದವರ ಕುರುಹೇ ಪತ್ತೆಯಾಗಿಲ್ಲ.
ಸೋಮವಾರ ಎನ್ ಡಿ ಆರ್ ಎಫ್ ತಂಡ ಬೆಳಿಗ್ಗೆ ಸ್ಥಳೀಯ ಈಜುಗಾರ ಕೇಶವ ಬೈತ್ತಡ್ಕ ಅವರನ್ನು ಸೇರಿಸಿಕೊಂಡು ಬೈತ್ತಡ್ಕದಲ್ಲಿ ಪತ್ತೆಗೆ ಇಳಿದು ನಂತರ ಕಾಣಿಯೂರು ಹೊಳೆ ಕುಮಾರಧಾರಕ್ಕೆ ಸೇರುವ ಕಾಪೆಜಾಲ್ ಎಂಬಲ್ಲಿಂದ ಪತ್ತೆ ಕಾರ್ಯ ನಡೆಸಿದೆ. ಬೈತಡ್ಕದಲ್ಲಿ ಗುತ್ತಿಗಾರಿನ ತಂಡ ಪತ್ತೆ ಕಾರ್ಯ ನಡೆಸಿತು. ಆದರೂ ನಾಪತ್ತೆಯಾದವರು ಪತ್ತೆಯಾಗಲೇ ಇಲ್ಲ.
ಎನ್ ಡಿ ಆರ್ ಎಫ್ ತಂಡ ಕೇವಲ ಬೋಟ್ ನಲ್ಲೇ ಸಂಚರಿಸಿ ತಪಾಸಣೆ ನಡೆಸುತ್ತಿದೆ . ಪೊದೆಗಳಿರುವ ಈ ಹೊಳೆಯಲ್ಲಿ ಸಿಲುಕಿದ್ದರೂ ದೇಹ ತೇಲುವುದಿಲ್ಲ. ನದಿಗೆ ಇಳಿದು ಪತ್ತೆ ಮಾಡಿದರೆ ಮಾತ್ರ ಪೊದೆಯಲ್ಲಿ ಯುವಕರ ದೇಹಗಳಿದ್ದರೆ ಸಿಗಲಿದೆ ಎನ್ನುತ್ತಾರೆ ಸ್ಥಳೀಯರು.
ಕುಮಾರಧಾರ ನದಿ ರಭಸವಾಗಿ ಹರಿಯುತ್ತಿರುವುದರಿಂದ ಹೊಳೆಯಲ್ಲಿರುವ ವಸ್ತುಗಳು ನದಿಗೆ ಸೇರಲು ತಡವಾಗುತ್ತದೆ ಎನ್ನುತ್ತಾರೆ ಸ್ಥಳೀಯ ಅನುಭವಿ ಮುಳುಗುತಜ್ಞರು. ಹಲವು ಅನುಮಾನಗಳ ನಡುವೆ ಪೊಲೀಸ್ ಇಲಾಖೆ ತಪಾಸಣೆ ತೀವ್ರಗೊಳಿಸಿದೆ. ಕಾರ್ಯಾಚರಣೆ ಇಂದೂ ಮುಂದುವರಿಯಲಿದೆ.