ಸಮಗ್ರ ನ್ಯೂಸ್: ಅರಬ್ಬಿ ಸಮುದ್ರದಲ್ಲಿ ಉಂಟಾದ ಸುಳಿಗಾಳಿ ಪರಿಣಾಮ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ದ.ಕ, ಉಡುಪಿ ಜಿಲ್ಲೆಗಳಿಗೆ ಜಲದಿಗ್ಬಂಧನ ಉಂಟಾಗಿದೆ.
ದ.ಕ ಜಿಲ್ಲೆಯ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, 8.5 ಮಿ. ಎತ್ತರದಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಶನಿವಾರ ಬೆಳಿಗ್ಗೆ ನೀರಿನ ಮಟ್ಟದಲ್ಲಿ ಇಳಿಕೆ ಕಂಡು ಬಂದಿದ್ದು, 6.3 ಮಿ. ಎತ್ತರದಲ್ಲಿ ಹರಿಯುತ್ತಿತ್ತು.ಆದರೆ ಸಂಜೆಯಾಗುತ್ತಿದ್ದಂತೆ ನೇತ್ರಾವತಿ ನದಿ ತುಂಬಿ ಹರಿಯಲು ಪ್ರಾರಂಭಿಸಿದೆ.
ಬಾರಿ ವೇಗವಾಗಿ ನೀರು ಹರಿಯುತ್ತಿದ್ದು ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ಬೆಳಿಗ್ಗೆ 6 ಗಂಟೆಯ ವೇಳೆಗೆ 8.5 ಮಿ.ಎತ್ತರದಲ್ಲಿ ಅಪಾಯದ ಮಟ್ಟವನ್ನು ತಲುಪಿದೆ. ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಉಪ್ಪಿನಂಗಡಿಯಲ್ಲೂ ನದಿ ನೀರಿನ ಮಟ್ಟ ಏರಿಕೆಯಾಗಿದೆ.
ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಭಾರೀ ನೀರಿನ ಪ್ರಮಾಣ ಏರಿಕೆಯಾಗಿದ್ದು ಪರಿಣಾಮ ನದಿ ನೀರು ಹೆದ್ದಾರಿಗೆ ನುಗ್ಗಿರುವ ಘಟನೆ ನಡೆದಿದೆ.
ಸುಬ್ರಹ್ಮಣ್ಯದ ಕುಮಾರಧಾರದಲ್ಲಿ ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ದರ್ಪಣ ತೀರ್ಥ ಸೇತುವೆಯಿಂದ ಸುಮಾರು ಇನ್ನೂರು ಮೀಟರ್ ದೂರದವರೆಗೆ ಹೆದ್ದಾರಿ ಜಲಾವೃತಗೊಂಡಿದೆ. ಪಂಜ – ಕಡಬ ರಸ್ತೆಯ ಪುಳಿಕುಕ್ಕು ಬಳಿ ನದಿ ನೀರು ರಸ್ತೆಗೆ ನುಗ್ಗಿದ ಪರಿಣಾಮ ಸಂಪರ್ಕ ಕಡಿತಗೊಂಡಿದೆ.
ಕುಮಾರಪರ್ವತ ಸುಬ್ರಹ್ಮಣ್ಯ ಸುತ್ತಮುತ್ತ ಭಾರಿ ಮಳೆ ಹಿನ್ನೆಲೆ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಹಲವು ದಿನಗಳಿಂದ ಸ್ನಾನಘಟ್ಟ ಮುಳುಗಡೆಯಾಗಿದೆ. ಕುಮಾರಧಾರ ನದಿಯ ಉಪನದಿ ರಾಜ್ಯ ಹೆದ್ದಾರಿಯಲ್ಲಿರುವ ದರ್ಪಣ ತೀರ್ಥ ಸೇತುವೆ ಜಲಾವೃತಗೊಂಡಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ.
ಕಾಣಿಯೂರು ಬಳಿ ಗೌರಿಹೊಳಗೆ ರಾತ್ರಿ ವೇಳೆ ಕಾರೊಂದು ಬಿದ್ದಿರುವ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಮಡಿಕೇರಿ ತಾಲ್ಲೂಕಿನ ಸಂಪಾಜೆ ಬಳಿಯ ಕೊಯಿನಾಡಿನಲ್ಲಿ ಕಿಂಡಿ ಅಣೆಕಟ್ಟಿನಿಂದ ಮನೆಗಳಿಗೆ ನೀರು ನುಗ್ಗಿ, ನಾಲ್ಕು ಮನೆಗಳು ಜಲಾವೃತವಾಗಿದೆ. ಕೊಯಿನಾಡು ಬಳಿ ಕಿಂಡಿ ಅಣೆಕಟ್ಟಿಗೆ ಅಡ್ಡಲಾಗಿ ಮರದ ದಿಮ್ಮಿಗಳು ನಿಂತಿರುವ ಹಿನ್ನೆಲೆಯಲ್ಲಿ ಅಣೆಕಟ್ಟಿನ ನೀರು ಮನೆಗಳಿಗೆ ನುಗ್ಗಿದೆ. ಮತ್ತೊಂದೆಡೆ ಹೆದ್ದಾರಿ ಸಮೀಪದಲ್ಲೇ ಹರಿಯುತ್ತಿರುವ ಪ್ರವಾಹದ ನೀರಿನಿಂದಾಗಿ ಮಡಿಕೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮುಳುಗಡೆ ಭೀತಿ ಎದುರಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಹಲವು ಸ್ಥಳಗಳು ಜಲಾವೃತಗೊಂಡಿವೆ. ಐಎನ್‌ಎಸ್ ಕದಂಬ ನೌಕಾನೆಲೆ ಬಳಿಯ ಚೆಂಡಿಯೆ ಗ್ರಾಮದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಭಾರೀ ಮಳೆಯಿಂದ ಹಲವಾರು ಗ್ರಾಮಗಳು ಸಂಪರ್ಕ ಕಡಿತಗೊಂಡಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ರಾಜ್ಯದಲ್ಲಿ ಇನ್ನೂ 5 ದಿನ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಮೂರು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಉತ್ತರ ಒಳನಾಡಿನಲ್ಲಿ 5 ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನಲ್ಲಿ 3 ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.