ಸಮಗ್ರ ನ್ಯೂಸ್: ನಿನ್ನೆ ತಡರಾತ್ರಿ(ಜು.9) ಸುರಿದ ಭಾರೀ ಮಳೆಯಿಂದಾಗಿ ಉಪ್ಪುಕಳ ಸಂಪರ್ಕಕ್ಕಾಗಿ ಇದ್ದ ಏಕೈಕ ಮರದ ಪಾಲ ನೀರುಪಾಲಾಗಿದ್ದು ಇಲ್ಲಿನ ನಿವಾಸಿಗಳು ದ್ವೀಪವಾಸಿಗಳಾಗಿದ್ದಾರೆ.
ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಸುಮಾರು 11 ಕುಟುಂಬಗಳು ವಾಸಿಸುತ್ತಿದ್ದು, ಈ ಪರಿಸರವನ್ನು ಸಂಪರ್ಕಿಸಲು ಮರದ ಪಾಲವೇ ಗತಿಯಾಗಿತ್ತು. 49ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದು ಒಬ್ಬ ಅಂಗವಿಕಲರೂ ಇದ್ದಾರೆ. ಈ ಗ್ರಾಮವನ್ನು ಸಂಪರ್ಕಿಸುವ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದು, ಗ್ರಾಮಸ್ಥರೇ ಮರದ ಪಾಲ ನಿರ್ಮಿಸಿಕೊಂಡು ಹೊಳೆ ದಾಟುತ್ತಾರೆ.
ತುಂಬಿ ಹರಿಯುವ ಹೊಳೆಗೆ ನಿರ್ಮಿಸಿದ ಕಚ್ಚಾ ಪಾಲದಲ್ಲಿ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಪಾಲ ದಾಟುವ ಸ್ಥಿತಿ ಇಂದಿನವರೆಗೂ ಮುಂದುವರಿದಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಇದೇ ಪರಿಸ್ಥಿತಿ ಇದ್ದು, ಸ್ವಾತಂತ್ರ್ಯ ಬಂದ ಮೇಲಾದರೂ ಸೇತುವೆ ಆಗಬಹುದೆಂದು ಹಿರಿಯರು ಕನಸು ಕಂಡಿದ್ದರಂತೆ. ಆದರೆ ಅದಿನ್ನೂ ಕನಸಾಗಿಯೇ ಉಳಿದಿದೆ.
ಪ್ರತಿ ವರ್ಷ ಮಳೆಗೆ ಮೊದಲು ಈ ಭಾಗದ ನಿವಾಸಿಗಳೇ ಸೇರಿ ಸ್ಥಳೀಯವಾಗಿ ಸಿಗುವ ಮರ,ಬಿದಿರು, ಬಳ್ಳಿಗಳನ್ನು ಬಳಸಿ ಕಾಲು ಸೇತುವೆ ದುರಸ್ತಿ ಪಡಿಸಿ ಜೀವಮಾನ ಕಳೆಯುತ್ತಿದ್ದಾರೆ. ಈ ಭಾರಿ ಸುರಿದ ವಿಪರೀತ ಮಳೆಗೆ ಹೆಚ್ಚಿನ ಪ್ರವಾಹ ಬಂದು ಕಾಲು ಸೇತುವೆ ನೀರಿನಲ್ಲಿ ಭಾಗಶಃ ಕೊಚ್ಚಿ ಹೋಗಿದೆ. ಇಲ್ಲಿ ನೆಲೆಸಿರುವ 11 ಮನೆಗಳಿಗೆ ಈ ದಾರಿಯಿಲ್ಲದಾಗಿದೆ.
ಯಾವುದೇ ಬೇಡಿಕೆ ಸಲ್ಲಿಸಿದರೂ, ಮತದಾನ ಬಹಿಷ್ಕರಿಸಿದರೂ ಯಾರು ಕ್ಯಾರೇ ಅನ್ನುತ್ತಿಲ್ಲ. ಜನ ಸಂಖ್ಯೆ ಕಡಿಮೆ ಇರುವ ಕಾರಣ ಸೇತುವೆ ನಿರ್ಮಿಸಲಾಗದು ಎಂಬ ಉತ್ತರ ಜನಪ್ರತಿನಿಧಿಗಳದ್ದು.
ಬೇಸಿಗೆ ಕಾಲದಲ್ಲಿ ಹೊಳೆಯ ನೀರು ಕಡಿಮೆಯಾದ ನಂತರ ವಾಹನಗಳು ಹೋಗಲು ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಈಗ ಕಾಲು ಸೇತುವೆ ಕೊಚ್ಚಿ ಹೋಗಿ ಶಾಲೆಗೆ ಹೋಗುವ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಅಸೌಖ್ಯತೆಗೊಳಗಾದವರ ಪಾಡು ಹೇಳತೀರದಾಗಿದೆ. ಜನರ ಬೇಡಿಕೆಗೆ ಯಾವುದೇ ಅಧಿಕಾರಿಗಳು,ಜನಪ್ರತಿನಿಧಿಗಳು ಕ್ಯಾರೇ ಅನ್ನುತ್ತಿಲ್ಲ ಎಂಬ ಅಳಲನ್ನು ನಿವಾಸಿಗಳು ತೋಡಿಕೊಳ್ಳುತ್ತಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಈ ದುರ್ಗತಿಗೆ ಮುಕ್ತಿ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.