ಬೆಂಗಳೂರು : ನೂರು ದಿನಗಳ ಶೌಚಾಲಯಕ್ಕಾಗಿ ಪಿಎಸ್ಐಯಿಂದ ನಿರಂತರ ಅಭಿಯಾನಕ್ಕು ಬಿಬಿಎಂಪಿ ಕ್ಯಾರೇ ಎಂದಿಲ್ಲ. ಟ್ವಿಟರ್‌ನಲ್ಲಿ ಬರೋಬ್ಬರಿ ಪಿಎಸ್ಐ ಶಾಂತಪ್ಪ ನೂರು ದಿನ ಅಭಿಯಾನ ನಡೆಸಿದರೂ ಪ್ರಯೋಜನವಾಗಿಲ್ಲ. ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಸಾರ್ವಜನಿಕ ಶೌಚಾಲಯಬೇಕೆಂದು ಹೋರಾಟ ಮಾಡಲಾಗುತ್ತಿದೆ.
ಬಿಬಿಎಂಪಿ ಮತ್ತು ಸ್ಥಳೀಯ ಶಾಸಕರಿಗೆ ಟ್ಯಾಗ್ ಮಾಡಿ ಟ್ವಿಟರ್ ಅಭಿಯಾನ ಮಾಡಿದ್ದಾರೆ. ಕೊನೆಗೆ ಬಿಬಿಎಂಪಿ ಮತ್ತು ಸ್ಥಳೀಯ ಶಾಸಕರು ಮಾಡಬೇಕಿದ್ದ ಕೆಲಸವನ್ನು ತಾವೇ ಮಾಡಿ ಪೂರೈಸಿದ್ದಾರೆ.
ನೂರು ದಿನಗಳ ಬಳಿಕ ತಾವೇ ಮೊಬೈಲ್ ಶೌಚಾಲಯ ನಿರ್ಮಿಸಿದ್ದಾರೆ. ಇದರಿಂದ ಗೊರಗುಂಟೆಪಾಳ್ಯ ಜಂಕ್ಷನ್ ಬಳಿ ಮೊಬೈಲ್ ಶೌಚಾಲಯ ನಿರ್ಮಾಣದಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಸದ್ಯ ವಿಧಾನಸೌಧ ಭದ್ರತಾ ವಿಭಾಗದಲ್ಲಿ ಪಿಎಸ್ಐ ಶಾಂತಪ್ಪ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಪ್ರೇರಣೆಯಿಂದ ಮೊಬೈಲ್ ಶೌಚಾಲಯ ನಿರ್ಮಾಣ ಮಾಡುತ್ತಿರುವುದಾಗಿ ಪಿಎಸ್ಐ ಶಾಂತಪ್ಪ ತಿಳಿಸಿದ್ದಾರೆ. ಗೊರಗುಂಟೆಪಾಳ್ಯ ಜಂಕ್ಷನ್ ಬಳಿ ಮೊಬೈಲ್ ಶೌಚಾಲಯ ವಾಹನ ನಿಲ್ಲಿಸಿದ್ದು, ಮಂಗಳಮುಖಿಯವರಿಂದ ಶೌಚಾಲಯ ಉದ್ಘಾಟನೆ ಮಾಡಲಾಗಿದೆ.
ಪ್ರತಿನಿತ್ಯ ಸಾವಿರಾರು ಜನ ಗೊರಗುಂಟೆಪಾಳ್ಯ ಜಂಕ್ಷನ್‌ನಿಂದ ರಾಜ್ಯದ ಉತ್ತರದ ಭಾಗದ ಕಡೆ ಪ್ರಯಾಣಿಸುತ್ತಾರೆ. ಹಗಲು ರಾತ್ರಿ ಬಸ್‌ಗಳಿಗೆ ಕಾದು ನಿಂತಿರುತ್ತಾರೆ. ಆದರೆ ಜಂಕ್ಷನ್‌ನಲ್ಲಿ ಶೌಚಾಲಯ ಇಲ್ಲದೆ ಸಾರ್ವಜನಿಕರ ಪರದಾಟ ಉಂಟಾಗಿತ್ತು. ಖುದ್ದು ತಮ್ಮ ತಾಯಿಯನ್ನ ಊರಿಗೆ ಕರೆದೊಯ್ಯುವಾಗ ಪಿಎಸ್ಐ ಶಾಂತಪ್ಪ ಪರಿತಪಿಸಿದ್ದರು.
ತಮ್ಮ ತಾಯಿ ಅನುಭವಿಸಿದ ತೊಂದರೆ ಬೇರೆಯವರು ಅನುಭವಿಸಬಾರದು ಅಂತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಶೌಚಾಲಯ ಬೇಕು ಅಂತ ಬಿಬಿಎಂಪಿ ಮತ್ತು ಸ್ಥಳೀಯ ಶಾಸಕ ಮುನಿರತ್ನ ಗಮನಕ್ಕೆ ತರಲು ನಿರಂತರ ಪ್ರಯತ್ನ ಮಾಡಿದರು.
ಮುನಿರತ್ನ ಹಾಗೂ ಬಿಬಿಎಂಪಿಗೆ ಟ್ಯಾಗ್ ಮಾಡಿ ಟ್ವಿಟರ್ ಅಭಿಯಾನ ಆರಂಭಿಸಿದರು. ಆದರೆ ಪಿಎಸ್ಐ ಅಭಿಯಾನಕ್ಕೆ ಬಿಬಿಎಂಪಿ ಮತ್ತು ಸಚಿವ ಮುನಿರತ್ನ ಕಿಂಚಿತ್ತೂ ಗಮನಹರಿಸಲಿಲ್ಲ.
ಬಳಿಕ ತಮ್ಮ ಆಪ್ತರ ಜೊತೆಗೂಡಿ ಮೊಬೈಲ್ ಶೌಚಾಲಯವನ್ನು ಪಿಎಸ್ಐ ಶಾಂತಪ್ಪ ನಿರ್ಮಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಪಿಎಸ್ಐ ಶಾಂತಪ್ಪ ಮಾಡಿರೋದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.