ಸಮಗ್ರ ನ್ಯೂಸ್: ತಮ್ಮ ಮನೆಯ ಮುಂದೆ ಹರಿಯುವ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಪರಿಸರ ಪ್ರೇಮಿ ತುಳಸಿ ಗೌಡ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರಿನ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ತುಳಸಿ ಗೌಡರವರ ಮನೆಯಿದ್ದು ಅದರ ಮುಂದೆ ಸಣ್ಣದೊಂದು ಹಳ್ಳ ಹರಿಯುತ್ತಿದೆ. ಈ ಹಳ್ಳವನ್ನು ಮಳೆಗಾಲದಲ್ಲಿ ದಾಟಲು ಆಗುವುದಿಲ್ಲ. ಹಾಗಾಗಿ ಹರಿಯುವ ಹಳ್ಳದಲ್ಲಿ ತಮ್ಮ ಮೊಮ್ಮಕ್ಕಳೊಂದಿಗೆ ನಿಂತು ಸೇತುವೆ ನಿರ್ಮಿಸಿ ಕೊಡುವಂತೆ ವೀಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಪ್ರತಿ ವರ್ಷ ಹೆಚ್ಚಿನ ಮಳೆಯಾಗುವುದರಿಂದ ಈ ಹಳ್ಳ ಭೋರ್ಗರೆದು ಹರಿಯುತ್ತದೆ. ನನಗೆ ವಯಸ್ಸಾಗಿದ್ದು ಆರೋಗ್ಯವಾಗಿರಲಿ, ಇಲ್ಲದಿರಲಿ ಈ ಹಳ್ಳವನ್ನು ಮಳೆಗಾಲದಲ್ಲಿ ದಾಟಲು ಆಗುವುದಿಲ್ಲ. ಆಸ್ಪತ್ರೆಗೆ ಹೋಗಬೇಕು ಎಂದರೂ ಈ ಹಳ್ಳದಿಂದ ದಾಟಿ ಹೋಗಲು ನನಗೆ ಆಗುವುದಿಲ್ಲ. ನನ್ನ ಮೊಮ್ಮಕ್ಕಳಿಗೆ ಶಾಲೆಗೆ ಹೋಗಲು ಈ ಹಳ್ಳ ದಾಟಲು ಆಗುವುದಿಲ್ಲ. ಈ ಹಿಂದೆ ಶಾಸಕರಿಗೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೆ. ಸೇತುವೆ ಮಾಡಿಕೊಡುವುದಾಗಿ ಭರವಸೆ ನೀಡಿ ವರ್ಷ ಕಳೆದರೂ ಸೇತುವೆ ಮಾಡಿಕೊಟ್ಟಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಜಿಲ್ಲಾಡಳಿತ ಹೇಳುವುದು ಏನು:
ಈ ಹಿಂದೆ ತುಳಸಿ ಗೌಡ ಮನವಿ ಮಾಡಿದ್ದು ನಿಜ. ಈ ಮೊದಲು ಅವರು ಕೇಳಿಕೊಂಡಂತೆ ರಸ್ತೆ ಹಾಗೂ ಬೀದಿ ದೀಪ ವ್ಯವಸ್ಥೆ ಮಾಡಲಾಗಿದೆ. ಸೇತುವೆ ಮಾಡಿಕೊಡುವಂತೆ ಕೇಳಿದ್ದಾರೆ. ಈ ಜಾಗ ಬೇರೆಯವರ ಖಾಸಗಿ ಜಾಗದಲ್ಲಿ ಬರುತ್ತದೆ. ಆ ಜಾಗದಲ್ಲಿ ಕಿರು ಸೇತುವೆ ನಿರ್ಮಿಸಲು ಖಾಸಗಿ ಜಾಗದ ಮಾಲೀಕರು ಒಪ್ಪಬೇಕು. ಅವರು ಒಪ್ಪಿ ಜಾಗ ಬಿಟ್ಟುಕೊಟ್ಟರೆ ಕಿರು ಸೇತುವೆ ಮಾಡಿಕೊಡಲು ಸಿದ್ಧರಿದ್ದೇವೆ ಎಂದು ಜಿಲ್ಲಾ ಪಂಜಾಯತ್ ಸಿಇಓ ಸ್ಪಷ್ಟಪಡಿಸಿದ್ದಾರೆ.