ಸಮಗ್ರ ನ್ಯೂಸ್: ಜಾರಿ ನಿರ್ದೇಶನಾಲಯ ವರದಿ ಆಧರಿಸಿ ಶಾಸಕ ಜಮೀರ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಎಸಿಬಿ, ಈಗ ಜಮೀರ್ ಸಾಮ್ರಾಜ್ಯದ ಸಂಪತ್ತಿನ ಶೋಧನೆಗೆ ಕಾರ್ಯಾಚರಣೆ ಶುರು ಮಾಡಿದೆ. ಎಸಿಬಿ ದಾಳಿ ಬಳಿಕ ಜಮೀರ್ಗೀಗ ಬಂಧನದ ಭೀತಿ ಎದುರಾಗಿದೆ.
ಜಮೀರ್ ಅಹಮದ್ ಖಾನ್ ಅವರ ನಿವಾಸದ ಮೇಲೆ ನಡೆದ ದಾಳಿ ವೇಳೆ ಲಕ್ಷಾಂತರ ರು. ನಗದು, ಕೋಟ್ಯಂತರ ಮೌಲ್ಯದ ವಜ್ರ ವೈಢೂರ್ಯ, ಚಿನ್ನಾಭರಣ, ಬೆಳ್ಳಿ ವಸ್ತುಗಳು, 9 ಲೀಟರ್ ವಿದೇಶಿ ಮದ್ಯ, ಅಪಾರ ಪ್ರಮಾಣದ ಭೂ ದಾಖಲೆಗಳು, 30ಕ್ಕೂ ಹೆಚ್ಚು ಜೀವಂತ ಗುಂಡುಗಳು ಹಾಗೂ ಪರವಾನಗಿ ಹೊಂದಿರುವ ರಿವಾಲ್ವಾರ್ ಅನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ 2019ರಲ್ಲಿ ಬೆಳಕಿಗೆ ಬಂದಿದ್ದ IMA ಕಂಪನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ಇಡಿ ತನಿಖೆ ನಡೆಸಿತ್ತು. ಆಗ ಐಎಂಐ ಕಂಪನಿ ಮಾಲೀಕ ಮನ್ಸೂರ್ ಮಹಮ್ಮದ್ ಖಾನ್ನಿಂದ 45 ಕೋಟಿ ರು ಮೌಲ್ಯದ ಆಸ್ತಿ ಖರೀದಿಸಿದ್ದು ಜಮೀರ್ ಅವರಿಗೆ ಇಡಿ ಉರುಳು ಸುತ್ತಿಕೊಂಡಿತು. ಈ ಸಂಬಂಧ ಎರಡು ಬಾರಿ ಶಾಸಕರನ್ನು ವಿಚಾರಣೆ ನಡೆಸಿದ ಇಡಿ, ಈ ಸಂಬಂಧ ಶಾಸಕರ ಮನೆ ಹಾಗೂ ಅವರ ವ್ಯವಹಾರದ ಕಂಪನಿಗಳ ಮೇಲೆ ದಾಳಿ ಸಹ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿತ್ತು. ತನ್ನ ತನಿಖೆ ವೇಳೆ ಜಮೀರ್ ಅವರು ಸರ್ಕಾರಕ್ಕೆ ಸಲ್ಲಿಸಿದ ಆಸ್ತಿ ಪ್ರಮಾಣಕ್ಕೂ ಅಗಣಿತ ವ್ಯತ್ಯಾಸ ಕಂಡು ಬಂದಿತು. ಈ ವರದಿ ಆಧರಿಸಿ ಕೊನೆಗೂ ಎಸಿಬಿ ತನಿಖೆ ಶುರು ಮಾಡಿದೆ.