ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ರಾಜ್ಯದ ಪ್ರಮುಖ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮೂರು ದಿನಗಳಿಂದ ಮುಳುಗಡೆಯಾಗಿದೆ.
ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ನದಿ ತೀರದ ತಗ್ಗು ಪ್ರದೇಶಗಳು ನೆರೆ ನೀರಿಗೆ ಮುಳುಗಡೆಯಾಗಿವೆ. ಹಲವು ಕಡೆಗಳಲ್ಲಿ ತೋಟಗಳಿಗೆ ನೀರು ನುಗ್ಗಿದ ಪರಿಣಾಮ ಕೃಷಿಹಾನಿಯಾಗಿದೆ.
ಸಂಗಮಕ್ಷೇತ್ರ ಉಪ್ಪಿನಂಗಡಿಯಲ್ಲಿ ನದಿ ಸಂಗಮಕ್ಕೆ ಭಕ್ತರು ಕಾತರರಾಗಿದ್ದು, ಕೆಲವೇ ಅಡಿಗಳಷ್ಟು ನೀರು ತುಂಬಲು ಬಾಕಿಇದೆ. ಸಂಗಮ ಪುಣ್ಯತೀರ್ಥದಲ್ಲಿ ಮಿಂದೇಳಲು ಭಕ್ತಾಧಿಗಳು ಕಾಯುತ್ತಿದ್ದಾರೆ. ಪುಣ್ಯ ನದಿಗಳಾದ ನೇತ್ರಾವತಿ, ಕುಮಾರಧಾರೆ ಇಲ್ಲಿ ಸಂಗಮವಾಗಿ ನದಿ ನೀರು ಗರ್ಭಗುಡಿ ಪ್ರವೇಶಿಸಿದರೆ ಸಂಗಮ ಎಂಬುದು ಭಕ್ತರ ನಂಬಿಕೆ.
ಇನ್ನು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅಲ್ಲಲ್ಲಿ ಭೂಕುಸಿತ, ನೆರೆಹಾನಿ ಸಂಭವಿಸಿರುವ ವರದಿಗಳು ಬರುತ್ತಿವೆ. ಮಳೆ ಮುಂದುವರಿಯುವ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಂಗಳೂರು-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ(169)ಯ ಗುರುಪುರ ಜಂಕ್ಷನ್ ಮತ್ತು ಪೊಳಲಿ ದ್ವಾರದ ಮದ್ಯೆ ಅಣೆಬಳಿಯ ವನಭೋಜನ ಎಂಬಲ್ಲಿ ಹೆದ್ದಾರಿಯ ಪಕ್ಕದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ, ಹೆದ್ದಾರಿ ಕುಸಿಯುವ ಭೀತಿ ಎದುರಾಗಿದೆ.
ಭಾರೀ ಮಳೆಯಿಂದ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಇದರಿಂದ ಹರೇಕಳ-ಅಡ್ಯಾರ್ ನಡುವಿನ ದೋಣಿ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಹರೇಕಳದಿಂದ ಅಡ್ಯಾರ್ ಮೂಲಕ ಮಂಗಳೂರು, ಫರಂಗಿಪೇಟೆ ಮತ್ತಿತರ ಪ್ರದೇಶಗಳಿಗೆ ತೆರಳುವ ಸಾರ್ವಜನಿಕರಿಗೆ ತೊಂದರೆಯಾಗಿದೆ.