ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯಲ್ಲಿ ಗಾಳಿ ಮಳೆ ಮುಂದುವರೆದಿದ್ದು, ಜಿಲ್ಲೆಯ ಹಲವೆಡೆ ಭೂಕುಸಿತ ಉಂಟಾಗಿದೆ. ಮಡಿಕೇರಿ – ಮಂಗಳೂರು ಹೆದ್ದಾರಿ ಮೇಲೆ ಗುಡ್ಡ ಕುಸಿತವಾಗಿ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಮಡಿಕೇರಿ ಹೊರವಲಯದ ಮೊಣ್ಣಂಗೇರಿ ಬಳಿ ಘಟನೆಯಾಗಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. 2018ರಲ್ಲಿ ಭೂಕುಸಿತವಾಗಿದ್ದ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಈಗ ಮತ್ತೆ ಅದೇ ಜಾಗದಲ್ಲಿ ಗುಡ್ಡದ ಮಣ್ಣು ಕುಸಿದಿದೆ.
ಅಲ್ಲದೇ ಮಳೆಗೆ ಸೋಮವಾರ ಪೇಟೆ, ಶನಿವಾರ ಸಂತೆ ಸಮೀಪದ ಸುಳುಗಳಲೇ ಗ್ರಾಮದಲ್ಲಿ ಗೋಡೆ ಕುಸಿತವಾಗಿ ವಸಂತಮ್ಮ ಎಂಬ ಮಹಿಳೆಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿರಂತರ ಸುರಿಯುತ್ತಿರುವ ಮಳೆಯು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (CESC) ಮೂಲಸೌಕರ್ಯಕ್ಕೆ ಹಾನಿಯನ್ನುಂಟುಮಾಡಿದೆ. ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಹಲವಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ಕೊಡಗು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆಯನ್ನು ಘೋಷಣೆ ಮಾಡಲಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 101.80 ಮಿ.ಮೀ ಮಳೆ ದಾಖಲಾಗಿದೆ. ಜುಲೈ 4ರಿಂದ ಇಲ್ಲಿಯವರೆಗೆ ವಿರಾಜಪೇಟೆ ತಾಲೂಕಿನಲ್ಲಿ 54.83 ಮಿ.ಮೀ ಹಾಗೂ ಸೋಮವಾರಪೇಟೆಯಲ್ಲಿ 40.87 ಮಿ.ಮೀ ಮಳೆಯಾಗಿದೆ.
ಸಂಪಾಜೆ (144 ಮಿ.ಮೀ.), ಭಾಗಮಂಡಲ (122 ಮಿ.ಮೀ.) ಮತ್ತು ಶಾಂತಳ್ಳಿ (111 ಮಿ.ಮೀ) ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಸತತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜುಲೈ 5ರ ಬೆಳಗ್ಗೆ 8.30ರವರೆಗೆ ಕೊಡಗಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು.
ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಗೆ ಒಳಹರಿವು ಹೆಚ್ಚುತ್ತಲೇ ಇದೆ. ಜುಲೈ 5 ರಂದು ಒಳಹರಿವು 9,497 ಕ್ಯೂಸೆಕ್ ಮತ್ತು ಹೊರಹರಿವು 12,866 ಕ್ಯೂಸೆಕ್ ಎಂದು ವರದಿಯಾಗಿದೆ.