ರಾಯಚೂರು (ಮೇ. 22): ಕೊರೋನಾ ಸೋಂಕಿನ ಬೆನ್ನಲ್ಲೇ ಮಾರಕ ಬ್ಲಾಕ್ ಫಂಗಸ್, ವೈಟ್ ಫಂಗಸ್ ರೋಗ ಸೋಂಕಿತರನ್ನು ಬಾಧಿಸುತ್ತಿದೆ.
ಈಗಾಗಲೇ ರಾಜ್ಯದಲ್ಲಿ ಸಾಲು ಸಾಲು ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸರ್ಕಾರ ಕೂಡ ಈ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಇದುವರೆಗೂ 250 ಬ್ಲಾಕ್ ಫಂಗಸ್ ಪ್ರಕರಣಗಳು ಕಂಡು ಬಂದಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ. ಇನ್ನು ರಾಜ್ಯ ಸರ್ಕಾರ ಬ್ಲಾಕ್ ಫಂಗಸ್ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಕೂಡ ತಿಳಿಸಿದ್ದಾರೆ.
ರಾಜ್ಯದಲ್ಲಿ ಬ್ಲಾಕ್ ಫಂಗಸ್ ಪ್ರಕರಣಗಳು ಹೆಚ್ಚಳಗೊಳ್ಳುತ್ತಿರುವ ಬೆನ್ನಲ್ಲೇ ಮೊದಲ ವೈಟ್ ಫಂಗಸ್ ಪ್ರಕರಣ ಬಿಸಿಲು ನಾಡು ರಾಯಚೂರಿನಲ್ಲಿ ಕಂಡು ಬಂದಿದೆ.
ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಸುಮಾರು 6 ಜನರಲ್ಲಿ ಬಿಳಿ ಶಿಲೀಂಧ್ರ ಲಕ್ಷಣಗಳು ಕಂಡು ಬಂದಿದೆ. ಕೋವಿಡ್ನಿಂದ ಗುಣಮುಖರಾದವರಲ್ಲಿ ಈ ವೈಟ್ ಫಂಗಸ್ ಕಂಡು ಬಂದಿದೆ ಎಂದು ಇಲ್ಲಿನ ಗ್ಯಾಸ್ಟ್ರೋ,ಲಿವರ್ ಹಾಗೂ ಎಂಡೋಸ್ಕೋಪಿ ತಜ್ಞ ಡಾ. ಮಂಜುನಾಥ್ ತಿಳಿಸಿದ್ದಾರೆ. ಕಳೆದ 15 ದಿನಗಳಲ್ಲಿ ಸುಮಾರು 6 ಜನರಲ್ಲಿ ಈ ವೈಟ್ ಫಂಗಸ್ ಪ್ರಕರಣ ಪತ್ತೆಯಾಗಿದೆ.
ಮನೆಯಲ್ಲೇ ಚೇತರಿಸಿಕೊಳ್ಳುತ್ತಿರುವ ಸೋಂಕಿತರಲ್ಲಿ ಈ ಬಿಳಿ ಶಿಲೀಂಧ್ರಗಳು ಕಂಡು ಬಂದಿದ್ದು, ಇದಕ್ಕೆ ಹೆದರಿಕೊಳ್ಳುವ ಅಗತ್ಯವಿಲ್ಲ ಡಾ.ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ. ಈ ವೈಟ್ ಫಂಗಸ್ಗೆ 14 ದಿನ ಔಷಧಿ ಕೊಡಲಾಗುತ್ತದೆ. 7 ದಿನದಲ್ಲಿ ಸೋಂಕಿತರು ಹುಷಾರಾಗುತ್ತಾರೆ. ಅನ್ನನಾಳದಲ್ಲಿ ತೊಂದರೆ ಕೊಡುವ ಈ ಸೋಂಕು ಜೀವಮಾರಕವಲ್ಲ. ಆದರೆ, ವೈಟ್ ಫಂಗಸ್ ರಕ್ತಕ್ಕೆ ಸೇರಿದರೆ ಮಾರಣಾಂತಿಕವಾಗುವ ಸಾಧ್ಯತೆಯಿದೆ ಎಂದರು.