ಸಮಗ್ರ ನ್ಯೂಸ್: ರಷ್ಯಾದ ಸರಕುಗಳು ಭಾರತಕ್ಕೆ ತಲುಪಲು ಈಗ ಹೊಸ ಮಾರ್ಗ ಸಿಕ್ಕಿದೆ. ಹೊಸ ಟ್ರೇಡ್ ಕಾರಿಡಾರ್ ಅನ್ನು ಇರಾನ್ ಪರೀಕ್ಷಿಸುತ್ತಿದ್ದು, ಈಗಾಗಲೇ ರಷ್ಯಾದಿಂದ ಎರಡು ದೊಡ್ಡ ಕಂಟೇನರ್‌ಗಳನ್ನು ಭಾರತಕ್ಕೆ ಈ ಮಾರ್ಗದಿಂದ ಸಾಗಿಸಲಾಗುತ್ತಿದೆ.
ಇರಾನ್ ದೇಶದ ಸುದ್ದಿ ಸಂಸ್ಥೆ ಮಾಡಿರುವ ವರದಿ ಪ್ರಕಾರ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ನಗರದ ಬಂದರಿನಿಂದ ರಷ್ಯಾದ ಹಡಗೊಂದು ಅದೇ ದೇಶದ ಕ್ಯಾಸ್ಪಿನ್ ಸಮುದ್ರದ ಬಳಿಯ ಆಸ್ಟ್ರಾಕ್ಸಾನ್ ಬಂದರಿನತ್ತ ಸಾಗುತ್ತಿದೆ. ಇದರಲ್ಲಿ 40 ಅಡಿಯಷ್ಟು ದೊಡ್ಡದಾದ ಮತ್ತು 41 ಟನ್ ತೂಕದ ಎರಡು ದೊಡ್ಡ ಕಂಟೇನರ್‌ಗಳಿವೆ. ಈ ಕಂಟೇನರ್‌ಗಳಲ್ಲಿ ಮರದ ಲ್ಯಾಮಿನೇಟ್ ಶೀಟ್‌ಗಳಿವೆ ಎನ್ನಲಾಗಿದೆ.
ರಷ್ಯಾ ಮೇಲೆ ಅಂತರರಾಷ್ಟ್ರೀಯ ನಿಷೇಧ ಹೇರಿಕೆ ಆದ ಬಳಿಕ ಇರಾನ್ ದೇಶ ನಾರ್ತ್ ಸೌತ್ ಕಾರಿಡಾರ್ ಯೋಜನೆಗೆ ಮರುಜೀವ ಕೊಡುವ ಪ್ರಯತ್ನ ಮಾಡುತ್ತಿದೆ. ಈ ಉತ್ತರ ಮತ್ತು ದಕ್ಷಿಣ ಕಾರಿಡಾರ್ ಮಾರ್ಗವು ರಷ್ಯಾದಿಂದ ಏಷ್ಯಾದ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುತ್ತದೆ. ರಷ್ಯಾದಿಂದ ಇರಾನ್‌ನ ಕ್ಯಾಸ್ಪಿಯನ್ ಸಮುದ್ರದ ಬಂದರುಗಳಿಗೆ ಬರುವ ಸರಕುಗಳನ್ನು ಆಗ್ನೇಯ ಭಾಗದಲ್ಲಿರುವ ಛಾಬಹಾರ್ ಬಂದರಿಗೆ ಸಾಗಿಸಲು ರಸ್ತೆ ಮತ್ತು ರೈಲು ಮಾರ್ಗಗಳನ್ನು ನಿರ್ಮಿಸುವ ಉದ್ದೇಶ ಇದೆ.
ಛಾಬಹಾರ್ ಎಂಬುದು ಭಾರತಕ್ಕೆ ಆಯಕಟ್ಟಿನ ಜಾಗವೂ ಆಗಿದೆ. ಇದರಲ್ಲಿರುವ ಎರಡು ಬಂದುಗಳಲ್ಲಿ ಒಂದನ್ನು ಭಾರತವೇ ಅಭಿವೃದ್ಧಿಪಡಿಸಿದೆ. ಭಾರತ ಮತ್ತು ಮಧ್ಯ ಏಷ್ಯನ್ ರಾಷ್ಟ್ರಗಳ ನಡುವಿನ ಸರಕು ಸಾಗಣೆಗೆ ಈ ಬಂದರು ಬಹಳ ಅನುಕೂಲ ಕಲ್ಪಿಸುತ್ತದೆ.