ಸಮಗ್ರ ನ್ಯೂಸ್: ಗಣಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ವರದಿ ಪ್ರಕಟಿಸುವ ತನಕ ಗಣಿಗಾರಿಕೆ ನಿಲ್ಲಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಮರ್ಕಂಜ ಅಳವುಪಾರೆಯಲ್ಲಿ ನಡೆದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ.
ಗ್ರಾಮಸ್ಥರ ಆಕ್ರೋಶದ ಹಿನ್ನೆಲೆಯಲ್ಲಿ ಜಿಲ್ಲಾ ಗಣಿ ಅಧಿಕಾರಿಗಳು ಮರ್ಕಂಜದಲ್ಲಿ ನಡೆಯುತ್ತಿರುವ ಕಗ್ಗಲ್ಲಿನ ಗಣಿಗಾರಿಕೆ ಹಾನಿ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮರ್ಕಂಜದ ಮಿನುಂಗೂರು ದೇವಸ್ಥಾನ, ಮಾಡ್ನೂರು ಹಿ.ಪ್ರಾ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಈ ಕುರಿತು ವರದಿ ನೀಡುವುದಾಗಿ ತಿಳಿಸಿದರು.
ಅದರೆ ಪರಿಶೀಲನೆ ಬಳಿಕ ಅಧಿಕಾರಿಗಳು ಬರೆದ ಮಹಜರಿನಲ್ಲಿ ಉಲ್ಲೇಖ ಮಾಡಿದ ಕೆಲವು ವಿಚಾರಗಳ ಬಗ್ಗೆ ಅಸಮಾಧಾನ ಉಂಟಾಗಿದೆ, ದೇವಸ್ಥಾನ ಬಿರುಕು ಬಿಟ್ಟಿದ್ದರು ಸರಿಯಾಗಿ ಉಲ್ಲೇಖ ಮಾಡಿರುವುದಿಲ್ಲ, ಅದಲ್ಲದೆ ನಾವು ಯಾರು ಮಹಜರಿಗೆ ಸಹಿ ಮಾಡಿಲ್ಲ ಎಂದು ಸ್ಥಳೀಯರು “ಸಮಗ್ರ ಸಮಾಚಾರ”ಕ್ಕೆಕರೆ ಮಾಡಿ ತಿಳಿಸಿದ್ದಾರೆ.
ಇದಾದ ಬೆನ್ನಲ್ಲೇ ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು, ಅಂಬೇಡ್ಕರ್ ರಕ್ಷಣಾ ವೇದಿಕೆ ಕಾರ್ಯಕರ್ತರು ಮಳೆಯಲ್ಲೇ ಪ್ರತಿಭಟನೆ ನಡೆಸಿದ್ದು, ವರದಿ ನೀಡುವಲ್ಲಿಯವರೆಗೆ ಗಣಿಗಾರಿಕೆ ಸ್ಥಗಿತಗೊಳಿಸಲು ಆಗ್ರಹಿಸಿದರು.
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಗ್ರಾ.ಪಂ ಅದ್ಯಕ್ಷೆ ಪವಿತ್ರಾ ಗುಂಡಿ, ಪಿಡಿಒ ರವಿಚಂದ್ರ ಧರಣಿ ನಿರತರೊಂದಿಗೆ ಮಾತುಕತೆ ನಡೆಸಿದ್ದು, ಗಣಿಗಾರಿಕೆ ಸ್ಥಗಿತಗೊಳಿಸಲು ತಹಶಿಲ್ದಾರರಿಗೆ ಮನವಿ ನೀಡುವುದಾಗಿ ಹೇಳಿದರು. ಈ ಕುರಿತು ಗಣಿ ಮಾಲಿಕರ ಜೊತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಬಳಿಕ ಪ್ರತಿಭಟನೆ ಹಿಂಪಡೆದಿದ್ದು, ಎರಡು ದಿನಗಳಲ್ಲಿ ಗಣಿಗಾರಿಕೆ ನಿಲ್ಲಿಸದಿದ್ದರೆ ಸುಳ್ಯ ತಾ.ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಮನವಿ ಸಲ್ಲಿಸಲಾಯಿತು.