ಸಮಗ್ರ ನ್ಯೂಸ್: ಕಳೆದ ಐದು ದಿನಗಳ ಅವಧಿಯಲ್ಲಿ ಕೊಡಗಿನಲ್ಲಿ ಮೂರು ಬಾರಿ ಭೂಕಂಪ ಆಗುತ್ತಿದ್ದಂತೆ ಕೊಡಗು ಜಿಲ್ಲೆಗೆ ಬೆಂಗಳೂರಿನಿಂದ ಹಿರಿಯ ಭೂ ವಿಜ್ಞಾನಿಗಳ ತಂಡ ಆಗಮಿಸಿದ್ದು, ಅಧ್ಯಯನ ಆರಂಭಿಸಿದೆ. ಮಡಿಕೇರಿ ತಾಲ್ಲೂಕಿನ ಕರಿಕೆ, ಚೆಂಬು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜೂನ್ 25 ಮತ್ತು 29 ರಂದು ಎರಡು ದಿನಗಳಲ್ಲಿ ಮೂರು ಬಾರಿ ಭೂಕಂಪವಾಗಿತ್ತು.
ಜೂ.28ರಂದು ನಡೆದಿದ್ದ ಭೂಕಂಪಕ್ಕೆ ಜಿಲ್ಲೆಯ ಹಲವೆಡೆ ಚಿಕ್ಕಪುಟ್ಟ ಸಮಸ್ಯೆಗಳು ಎದುರಾಗಿದ್ದವು. ಬೆಳಿಗ್ಗೆ 7.45 ಕ್ಕೆ ಚೆಂಬು ಗ್ರಾಮದಲ್ಲಿ 3.0 ರಿಕ್ಟರ್ ಪ್ರಮಾಣದ ಭೂಕಂಪವಾಗಿತ್ತು. ಸಂಜೆ ಮತ್ತೆ ಅದೇ ಸ್ಥಳದಲ್ಲಿ 1.7 ತೀವ್ರತೆಯ ಭೂಕಂಪವಾಗಿತ್ತು.
ಹೀಗೆ ಪದೇ ಪದೇ ಭೂಕಂಪವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಹಿರಿಯ ಭೂ ವಿಜ್ಞಾನಿಳಾದ ಡಾ. ಜಗದೀಶ್ ಮತ್ತು ಡಾ. ರಮೇಶ್ ದಿಕ್ಪಾಲ್ ಅವರ ನೇತೃತ್ವದ ತಂಡವನ್ನು ಕೊಡಗು ಜಿಲ್ಲೆಗೆ ಕಳುಹಿಸಿದೆ.
ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅಧಿಕಾರಿ ಅನನ್ಯ ವಾಸುದೇವ್ ಅವರು ಸೇರಿದಂತೆ ತಂಡವು, ಭೂಕಂಪವಾಗಿದ್ದ ಚೆಂಬು ಗ್ರಾಮಕ್ಕೆ ಬುಧವಾರ ಭೇಟಿ ನೀಡಿದೆ. ಜನರ ಓಡಾಟ ಕಡಿಮೆ ಇರುವ ಸ್ಥಳದಲ್ಲಿ ಸೆಸ್ಮೋಗ್ರಫಿ ಅಬ್ಸರ್ವರ್ ತಂತ್ರಜ್ಞಾನವನ್ನು ಅಳವಡಿಸಿ ಅಧ್ಯಯನ ಆರಂಭಿಸಿದೆ. ಜೊತೆಗೆ ಕರಿಕೆಯಲ್ಲಿ ಜೂನ್ 25 ರಂದು ಭೂಕಂಪವಾಗಿದ್ದ ಪ್ರದೇಶಕ್ಕೂ ತಂಡ ಭೇಟಿ ನೀಡಲಿದ್ದು, ಅಲ್ಲಿನ ಭೂಮಿಯಾಳದ ಬೆಳವಣಿಗೆ ಬಗ್ಗೆಯು ಅಧ್ಯಯನ ನಡೆಸಲಿದೆ.
ಜೊತೆಗೆ ಎರಡು ಭಾಗಗಳಲ್ಲೂ ಜನರಿಂದ ತಂಡವು ಮಾಹಿತಿ ಸಂಗ್ರಹಿಸುತ್ತಿದೆ. ಭೂಕಂಪದ ಬಳಿಕ ಕರಿಕೆ ಮತ್ತು ಚೆಂಬು ಗ್ರಾಮಗಳ ಸುತ್ತಮುತ್ತ ಸೇರಿದಂತೆ ಎಲ್ಲಾದರೂ ಭೂಮಿ ಬಿರುಕು ಬಿಟ್ಟಿದೆಯೇ ಎಂಬ ಮಾಹಿತಿಯನ್ನು ತಂಡವು ಕಲೆಹಾಕುತ್ತಿದೆ. ಮಳೆಗಾಲವೂ ಆರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಮೂರು ಬಾರಿ ಭೂಕಂಪವಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ.
ಹೀಗಾಗಿ ಒಂದೆಡೆ ವಿಜ್ಞಾನಿಗಳ ತಂಡ ಕೊಡಗಿಗೆ ಬಂದು ಭೂಕಂಪದ ಸ್ಥಳಗಳಲ್ಲಿ ಅಧ್ಯಯನ ಆರಂಭಿಸಿದ್ದರೆ, ಮತ್ತೊಂದೆಡೆ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಅವರು ಜಿಲ್ಲಾಡಳಿತ ಮತ್ತು ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ್ದಾರೆ. ಪ್ರವಾಹ, ಭೂಕುಸಿತದ ಪರಿಸ್ಥಿತಿ ಎದುರಾದರೆ ಅದನ್ನು ನಿಭಾಯಿಸುವ ಕುರಿತು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂಪೂರ್ಣ ತಯಾರಿ ಮಾಡಿಕೊಂಡಿದ್ದು, ಅಗತ್ಯ ಮುನ್ನೆಚ್ಚರ ವಹಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. ಯಾರೂ ಸಹ ಆತಂಕ ಪಡಬೇಕಿಲ್ಲ. ಕುಶಾಲನಗರ ಭಾಗದಲ್ಲಿ ಪ್ರವಾಹ ಎದುರಾಗದಂತೆ ಹಾರಂಗಿ ಜಲಾಶಯ ತುಂಬುವುದಕ್ಕೆ ಇನ್ನೂ ಐದು ಅಡಿ ಬಾಕಿ ಇರುವಾಗಲೇ ಮಳೆಯ ಪರಿಸ್ಥಿತಿಯನ್ನು ನೋಡಿ ನದಿಗೆ ನೀರು ಹರಿಸಲಾಗುವುದು ಎಂದಿದ್ದಾರೆ.
ಒಟ್ಟಾರೆ ಕೊಡಗು, ದ.ಕ ಗಡಿಭಾಗದಲ್ಲಿ ಭೂಮಿಯ ಕಂಪನದಿಂದಾಗಿ ಜನರು ಭಯಬೀತರಾಗಿದ್ದಾರೆ. ಈ ನಡುವೆ ಮಳೆಯೂ ಬಿರುಸು ಪಡೆದುಕೊಂಡಿದ್ದು, ಮತ್ತೊಮ್ಮೆ ಅನಾಹುತ ಸಂಭವಿಸಿದಂತೆ ಎಚ್ಚರ ವಹಿಸಲು ಜಿಲ್ಲಾಡಳಿತಗಳು ಸಜ್ಜಾಗಬೇಕಿದೆ.