ಸಮಗ್ರ ನ್ಯೂಸ್: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ದ್ವಿಚಕ್ರವಾಹನ ಸವಾರರು ಪರದಾಡುವಂತಾಗಿದೆ. ಮಂಗಳೂರಿನ ಕೆಲ ಖಾಸಗಿ ಶಾಲೆಗಳು ರಜೆ ಘೋಷಿಸಿವೆ.
ಮಳೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ನಿಗಾ ವಹಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೆ ಮಕ್ಕಳು ಶಾಲೆಗಳಿಗೆ ಬಂದಿದ್ದರೆ ಎಲ್ಲಾ ಮುಂಜಾಗೃತೆ ವಹಿಸಿ ಕಾರ್ಯ ನಿರ್ವಹಿಸಲು ಶಾಲೆಗಳಿಗೆ ಸೂಚಿಸಲಾಗಿದೆ. ಮಕ್ಕಳು ಶಾಲೆಗೆ ಬರಲು ಅನಾನುಕೂಲವಾದ ಪ್ರದೇಶದಲ್ಲಿ ಅಂತಹ ಮಕ್ಕಳಿಗೆ ಈ ದಿನ ರಜೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಕಳೆದ ರಾತ್ರಿಯಿಂದ ಬಿರುಸುಗೊಂಡಿರುವ ಮುಂಗಾರು ಮಳೆಯಿಂದ ನಗರದ ಕಣ್ಣೂರು, ಕೊಟ್ಟಾರ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕೆಲವೆಡೆ ಮನೆಗಳಿಗೆ, ಕಚೇರಿಗಳಿಗೆ ನೀರು ನುಗ್ಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಮಾನ ನಿಲ್ದಾಣ ರಸ್ತೆಯಲ್ಲೂ ಸಂಚಾರಕ್ಕೆ ತೊಂದರೆಯಾಗಿದೆ. ಕೊಟ್ಟಾರ ಚೌಕಿಯಲ್ಲೂ ನೀರು ನಿಂತಿದೆ. ಕೊಣಾಜೆ ಬಳಿಯ ಮುಡಿಪುವಿನ ಮಂಜನಾಡಿ ಗ್ರಾಮದ ಅಸೈಗೋಳಿ ಬಳಿ ಆವರಣ ಗೋಡೆ ಕುಸಿದು ಬಿದ್ದು ಕೆ ವೇದಾವತಿ ಎಂಬವರ ಮನೆಗೆ ಹಾನಿಯಾಗಿದೆ.
ಕೊಣಾಜೆ ಬಳಿಯ ಮುಡಿಪುವಿನ ಮಂಜನಾಡಿ ಗ್ರಾಮದ ಅಸೈಗೋಳಿ ಬಳಿ ಆವರಣ ಗೋಡೆ ಕುಸಿದು ಬಿದ್ದು ಕೆ ವೇದಾವತಿ ಎಂಬವರ ಮನೆಗೆ ಹಾನಿಯಾಗಿದೆ. ಕೊಣಾಜೆ ಗ್ರಾಮದ ಮುಚ್ಚಿಲಕೋಡಿಯ ಉಮೇಶ್ ಎಂಬವರ ಮನೆಯ ಬಾವಿಗೆ ಗುಡ್ಡ ಕುಸಿದು ಬಿದ್ದು ಬಾವಿ ಸಂಪೂರ್ಣವಾಗಿ ಮುಚ್ಚಿ ಹೋಗಿದೆ.
ಮರವೂರು ಸೇತುವೆ ಬಳಿ ಬಿರುಕು ಉಂಟಾಗಿದ್ದು ಮುಲ್ಕಿಯ ಶ್ರೀದೇವಿ ಕಾಲೇಜು ಬಳಿ ಭೂಕುಸಿತ ಉಂಟಾಗಿದೆ.
ಸಹಾಯವಾಣಿ ಸಂಖ್ಯೆ
ಯಾವುದೇ ಸಂದರ್ಭದಲ್ಲೂ ಜಿಲ್ಲೆಯ ಜನರು ನೆರೆ ಭೀತಿ, ಅಪಾಯದ ಸ್ಥಿತಿಯಲ್ಲಿ ಸಿಲುಕಿಕೊಳ್ಳುವ ಆತಂಕ ಎದುರಾದಲ್ಲಿ ಈ ಕೆಳಗಿನ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ತುರ್ತು ಸಹಾಯವಾಣಿ ಸಂಖ್ಯೆ – 1077
ಮೆಸ್ಕಾಂ – 1912 (ವಿದ್ಯುತ್ ಸಂಬಂಧಿತ ದೂರು)
ಪೊಲೀಸ್ – 100
ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆ: 0824-2442590, 2220319, 9483908000
ಎಡೆಬಿಡದೇ ಸುರಿಯುತ್ತಿದೆ ಮಳೆ
ಬುಧವಾರ ತಡರಾತ್ರಿಯಿಂದ ಆರಂಭವಾಗಿರುವ ಮಳೆ ಇದುವರೆಗೂ ಎಡೆಬಿಡದೇ ಸುರಿಯುತ್ತಿದೆ. ಮಂಗಳೂರು ನಗರದ ಕೊಟ್ಟಾರ ಚೌಕಿ, ಪಡೀಲ್ ಅಂಡರ್ ಪಾಸ್, ಜ್ಯೋತಿ, ಪಂಪ್ ವೆಲ್ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ನಗರದ ಹೊರವಲಯದ ಹಲವು ಪ್ರದೇಶಗಳು ನೆರೆ ಭೀತಿ ಎದುರಿಸುತ್ತಿದೆ.
ಆರೆಂಜ್ ಅಲರ್ಟ್ ಘೋಷಣೆ
ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಜೂನ್ 30 ಹಾಗೂ ಜುಲೈ 1 ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ನದಿ ತಟದಲ್ಲಿ ಮುಳುಗಡೆ ಭೀತಿ
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜೀವನದಿಗಳಾದ ಫಲ್ಗುಣಿ, ಶಾಂಭವಿ, ಕುಮಾರಧಾರ ಹಾಗೂ ನೇತ್ರಾವತಿ ನದಿಗಳು ತುಂಬಿ ಹರಿಯುತ್ತಿದೆ. ನದಿ ತಟದಲ್ಲಿರುವ ಪ್ರದೇಶಗಳಲ್ಲಿ ನೆರೆ ಭೀತಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ನದಿ ಪ್ರದೇಶಗಳಿಗೆ ತೆರಳದಂತೆ ಈಗಾಗಲೇ ಜಿಲ್ಲಾಡಳಿತವು ಆದೇಶಿಸಿದೆ.
ಜಿಲ್ಲಾಡಳಿತ ಸನ್ನದ್ಧ
ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತವು ಸನ್ನದ್ಧವಾಗಿದೆ. ಈಗಾಗಲೇ ಜಿಲ್ಲೆಗೆ 20 ಮಂದಿ ಸದಸ್ಯರು ಇರುವ NDRF, 36 ಸದಸ್ಯರ SDRF ತಂಡಗಳು ಆಗಮಿಸಿವೆ. ಜೊತೆಗೆ ಜಿಲ್ಲೆಯ ಗೃಹ ರಕ್ಷಕ ಹಾಗೂ ಅಗ್ನಿಶಾಮಕದಳವೂ ಸನ್ನದ್ಧವಾಗಿವೆ. 23 ಬೋಟ್ ಗಳು, 72 ಲೈಫ್ ಬೋಟ್, 341 ಲೈಫ್ ಜಾಕೆಟ್, 89 ಸರ್ಚ್ ಲೈಟ್, 27 ಅಸ್ಕಾ ಲೈಟ್, 14 ಪೋರ್ಟೆಬಲ್ ಜನರೇಟರ್, 29 ಪೋರ್ಟೆಬಲ್ ಪಂಪ್, 3 ಸ್ಕೂಬಾ ಡೈವಿಂಗ್ ಸೆಟ್ ಸೇರಿದಂತೆ ನೆರೆ, ಭೂಕುಸಿತ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತವು ಸಜ್ಜಾಗಿವೆ.
ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕಿನಲ್ಲೂ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಹಲವೆಡೆ ಸಣ್ಣ ಪ್ರಮಾಣದ ಭೂಕುಸಿತಗಳು ಸಂಭವಿಸಿವೆ. ಇತ್ತ ಸುಳ್ಯ- ಪಾಣತ್ತೂರು ರಸ್ತೆ ಮಳೆಯಿಂದಾಗಿ ಸಂಪರ್ಕ ಕಡಿತಗೊಂಡಿದೆ. ಕುಮಾರಧಾರಾ, ನೇತ್ರಾವತಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಕಾಣುತ್ತಿದೆ.