ರಾಮನಗರ: ಎಸ್ ಆರ್ ಎಸ್ ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಸಂಸ್ಥೆಯ ಸಂಸ್ಥಾಪಕ ಕೆ.ಟಿ. ರಾಜಶೇಖರ್ ನಿನ್ನೆ ನಿಧನ ಹೊಂದಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿತ್ತು, ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಮೃತಪಟ್ಟಿದ್ದಾರೆ.
1943 ರಲ್ಲಿ ಜನಿಸಿದ ರಾಜಶೇಖರ್ ಆಟೋಮೊಬೈಲ್ ಡಿಪ್ಲೋಮಾ ವ್ಯಾಸಂಗದ ಬಳಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಹಲವು ಕಡೆ ದುಡಿದಿದ್ದರು. ಕೆಲವೆಡೆ ಚಾಲಕರಾಗಿಯೂ ದುಡಿದಿದ್ದ ಅವರು 1971 ರಲ್ಲಿ ಎಸ್ಆರ್ಎಸ್ ಎಂಬ ಹೆಸರಿನ ಸಾರಿಗೆ ಉದ್ಯಮ ಆರಂಭಿಸಿ, ಇಂದಿಗೆ 3000ಕ್ಕೂ ಅಧಿಕ ಬಸ್ ಗಳ ಮಾಲಕರಾಗಿದ್ದರು.
78ರ ಇಳಿವಯಸ್ಸಿನಲ್ಲೂ 28ರ ಯುವಕನಂತೆ ಹುಮ್ಮಸ್ಸಿನಿಂದ ದುಡಿಯುತ್ತಿದ್ದ ರಾಜಶೇಖರ್ ದೇಶದ ಸಾರಿಗೆ ಉದ್ಯಮಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗದಾತರಾಗಿದ್ದ ಅವರ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.