ನವದೆಹಲಿ: ಭಾರತದ ಪ್ರತಿಷ್ಟಿತ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಡಾಟಾ ಪ್ರೊಸೆಸರ್ ಮೇಲೆ ಸೈಬರ್ ಕದೀಮರ ಕನ್ನ ಬಿದ್ದಿದ್ದು, ಕಳೆದ ಹತ್ತು ವರ್ಷದಲ್ಲಿ ನೋಂದಾಯಿಸಿಕೊಂಡಿದ್ದ 45 ಲಕ್ಷಕ್ಕೂ ಅಧಿಕ ಪ್ರಯಾಣಿಕರ ಮಾಹಿತಿ ಸೋರಿಕೆಯಾಗಿದೆ.
ತಂತ್ರಜ್ಞಾನ ಪೂರೈಕೆ ಸಂಸ್ಥೆ ಸಿಟಾ ನಿರ್ವಹಿಸುತ್ತದ್ದ ‘ಡಾಟಾ ಪ್ರೊಸೆಸರ್ ಆಫ್ ಪ್ಯಾಸೆಂಜರ್ ಸರ್ವಿಸ್ ಸಿಸ್ಟಂ’ನಲ್ಲಿ ಈ ಸೈಬರ್ ದಾಳಿ ನಡೆದಿದ್ದು, ಆಗಸ್ಟ್ 26, 2011 ಮತ್ತು ಫೆಬ್ರವರಿ 20, 2021 ರ ನಡುವೆ ನೋಂದಾಯಿಸಿದ ಪ್ರಯಾಣಿಕರ ಹೆಸರು, ಸಂಪರ್ಕ, ಪಾಸ್ಪೋರ್ಟ್ ಮಾಹಿತಿ, ಟಿಕೆಟ್ ಮಾಹಿತಿ, ಕ್ರೆಡಿಟ್ ಕಾರ್ಡ್ ವಿವರಗಳು ಸೋರಿಕೆಯಾಗಿವೆ ಎಂದು ಏರ್ ಇಂಡಿಯಾ ತಿಳಿಸಿದೆ.
ಕ್ರೆಡಿಟ್ ಕಾರ್ಡ್ ಹೊಂದಿರುವವರ ಸಿವಿವಿ / ಸಿವಿಸಿ ಮಾಹಿತಿಯನ್ನು ಸಿಟಾ ಪಿಎಸ್ಎಸ್ನಲ್ಲಿ ಸಂಗ್ರಹಿಸಲಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.
ದಾಳಿಗೊಳಗಾಗಿರುವ ಸರ್ವರ್ಗಳನ್ನು ಭದ್ರಪಡಿಸಲಾಗಿದೆ. ಭದ್ರತಾ ಲೋಪದ ಬಗ್ಗೆ ಪರಿಶೀಲನೆಗೆ ಹಾಗು ತನಿಖೆಗೆ ಬಾಹ್ಯ ತಜ್ಞರನ್ನು ಕರೆಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ದಾಳಿಗೊಳಗಾದ ಸರ್ವರ್ಗಳನ್ನು ಭದ್ರಪಡಿಸಿದ ನಂತರ ಯಾವುದೇ ಅಸಹಜ ಚಟುವಟಿಕೆ ಕಂಡುಬಂದಿಲ್ಲ. ಏರ್ ಇಂಡಿಯಾ ವೆಬ್ಸೈಟ್ನಲ್ಲಿ ಮತ್ತು ಬೇರೆಲ್ಲಿಯಾದರೂ ಇದಕ್ಕೆ ಅನ್ವಯವಾಗುವ ಪಾಸ್ವರ್ಡ್ಗಳನ್ನು ಹೊಂದಿದ್ದರೆ ಕೂಡಲೇ ಬದಲಾಯಿಸುವಂತೆ ಪ್ರಯಾಣಿಕರಲ್ಲಿ ಏರ್ ಇಂಡಿಯಾ ವಿನಂತಿ ಮಾಡಿಕೊಂಡಿದೆ.