ಸಮಗ್ರ ನ್ಯೂಸ್: ಯೋಗ ಕೇವಲ ವ್ಯಕ್ತಿಗಾಗಿ ಅಲ್ಲ ಅದು ಮನು ಕುಲದ ಒಳಿತಿಗಾಗಿ, ಇಡೀ ವಿಶ್ವಕ್ಕೆ ಶಾಂತಿ ನೀಡುವ ಶಕ್ತಿ ನಮ್ಮ ಯೋಗಕ್ಕಿದೆ. ಅದರ ಪ್ರಾಮುಖ್ಯತೆಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೈಸೂರು ಅರಮನೆ ಮೈದಾನದಲ್ಲಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.
ಈ ದಿನ ಆಚರಿಸುತ್ತಿರುವ 8ನೇ ಅಂತಾರಾಷ್ಟ್ರೀಯ ಯೋಗ ದಿನದಂದು ನಾನು ಎಲ್ಲರಿಗೂ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇಂದು ಪ್ರಪಂಚದ ಎಲ್ಲಾ ಭಾಗಗಳಲ್ಲಿ ಯೋಗವನ್ನು ಅಭ್ಯಾಸ ಮಾಡಲಾಗುತ್ತಿದೆ. ಯೋಗವು ನಮಗೆ ಶಾಂತಿಯನ್ನು ತರುತ್ತದೆ. ಕೇವಲ ನಮಗೆ ಮಾತ್ರವಲ್ಲ ಯೋವು ನಮ್ಮ ರಾಷ್ಟ್ರ ಸೇರಿದಂತೆ ಇಡೀ ಜಗತ್ತಿಗೆ ಶಾಂತಿಯನ್ನು ತರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಇಡೀ ವಿಶ್ವವು ನಮ್ಮ ದೇಹ ಮತ್ತು ಆತ್ಮದಿಂದ ಆರಂಭವಾಗುತ್ತದೆ. ವಿಶ್ವವು ನಮ್ಮಿಂದ ಪ್ರಾರಂಭವಾಗುತ್ತದೆ ಮತ್ತು ಯೋಗವು ನಮ್ಮೊಳಗಿನ ಎಲ್ಲವನ್ನೂ ಜಾಗೃತಗೊಳಿಸುತ್ತದೆ ಮತ್ತು ಅರಿವಿನ ಪ್ರಜ್ಞೆಯನ್ನು ನಿರ್ಮಿಸುತ್ತದೆ ಎಂದರು.
ಕೆಲವು ವರ್ಷಗಳ ಹಿಂದೆ ಯೋಗ ಮನೆಯೊಳಗೆ, ಆಧ್ಯಾತ್ಮಿಕ ಕೇಂದ್ರಗಳಲ್ಲಿ ನಡೆಯುತ್ತಿತ್ತು. ಈಗ ದೇಶದ ಮೂಲೆ ಮೂಲೆಗಳಲ್ಲಿ ಯೋಗ ನಡೆಯುತ್ತಿದೆ. ಇದು ವ್ಯಕ್ತಿಗಾಗಿ ಯೋಗವಲ್ಲ. ಮನು ಕುಲದ ಒಳಿತಿಗಾಗಿ ಯೋಗ. ಈ ಕಾರಣಕ್ಕೆ ಈ ಬಾರಿ ಮಾನವೀಯತೆಗಾಗಿ ಯೋಗ ಮಾಡುತ್ತಿದ್ದೇವೆ. ಇಡೀ ವಿಶ್ವಕ್ಕೆ ಶಾಂತಿ ನೀಡುವ ಶಕ್ತಿ ಯೋಗಕ್ಕೆ ಇದೆ. ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಮಾನಸಿಕ ಶಾಂತಿ, ಸದೃಢತೆಗೆ ಪ್ರತಿಯೊಬ್ಬರು ಯೋಗ ಮಾಡಬೇಕು. ಯೋಗಕ್ಕೆ ಇರುವ ಶಕ್ತಿಯನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಸಲಹೆ ನೀಡಿದರು.