ಮಂಗಳೂರು: ಇಂದು ನಮ್ಮ ದೇಶದ ಜನತೆಗೆ ವಿತರಿಸಲು ಕೋವಿಡ್ ವ್ಯಾಕ್ಸಿನ್ ಕೊರತೆ ಉಂಟಾಗಿದ್ದು, ದೇಶದ ಪ್ರಜೆಗಳಿಗೆ ಸಾಕಾಗುವಷ್ಟು ಲಸಿಕೆ ಇಟ್ಟುಕೊಳ್ಳದೆ ಹೊರ ರಾಷ್ಟ್ರಗಳಿಗೆ ಲಸಿಕೆ ಪೂರೈಸಿದ್ದು ಯಾಕೆ, ಎಂದು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಯು ಟಿ ಖಾದರ್ ಪ್ರಶ್ನಿಸಿದ್ದಾರೆ. ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅದಾಗಿಯೂ, ಸುಮಾರು 20ಕ್ಕೂ ಹೆಚ್ಚು ವಿದೇಶಿ ಲಸಿಕೆ ಕಂಪೆನಿಗಳು ಭಾರತಕ್ಕೆ ಲಸಿಕೆ ನೀಡಲು ತಯಾರಿರುವಾಗ, ಕೇವಲ ಒಂದೇ ಕಂಪನಿ, ಸ್ಪುಟ್ನಿಕ್ ಜೊತೆ ಮಾತ್ರ ಯಾಕೆ ಒಪ್ಪಂದ ಮಾಡಿಕೊಳ್ಳಲಾಗಿದೆ, ಇಂತಹ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿರುವಾಗ ಕೇಂದ್ರದ ಆರೋಗ್ಯ ಸಚಿವರು, ಆಹಾರ ಸಚಿವರು, ಹಣಕಾಸು ಸಚಿವರು ಯಾಕೆ ಕಾಣಸಿಗುತ್ತಿಲ್ಲ, ಎಲ್ಲ ಇಲಾಖೆಯ ನಿರ್ಧಾರಗಳನ್ನು ಪ್ರಧಾನಿಯೊಬ್ಬರು ಯಾಕೆ ತೆಗೆದುಕೊಳ್ಳುತ್ತಿದ್ದಾರೆ, ಇದು ಪ್ರಜಾಪ್ರಭುತ್ವವೋ ಅಥವಾ ನಿರಂಕುಶಪ್ರಭುತ್ವವೋ, ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇತರ ಸರ್ಕಾರಗಳು ಜನರ ಜೀವದ ಉಳಿವಿಗಾಗಿ ಆಕ್ಸಿಜನ್ ಹುಡುಕುತ್ತಿದ್ದರೆ, ಬಿಜೆಪಿ ಸರ್ಕಾರ ತನ್ನ ಪಕ್ಷದ ಉಳಿವಿಗಾಗಿ ಆಕ್ಸಿಜನ್ ಹುಡುಕುತ್ತಿದೆ, ತನ್ನ ಆಡಳಿತಕ್ಕೆ ಕಳಂಕ ಬರುತ್ತಿದೆ ಎನ್ನುವಾಗ ಪ್ರಜೆಗಳ ಹಾಗೂ ವಿಶ್ವದ ಎದುರು ಕೇಂದ್ರ ಸರ್ಕಾರ ಹಲವಾರು ನಾಟಕಗಳನ್ನು ಮಾಡುತ್ತಿದೆ, ಮಂಗಳೂರು ನಗರದಲ್ಲಿರೋ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ರೀಸರ್ಚ್ ಡಿಪಾರ್ಟ್‌ಮೆಂಟ್‌ನ ಲೆಟರ್ ಹೆಡ್‌ನ ನಕಲಿ ಪತ್ರವನ್ನು ತಯಾರಿಸಿ ಕೋಮು ಸಾಮರಸ್ಯ ಕದಡುವ ಸಂದೇಶಗಳನ್ನು ಟೂಲ್ ಕಿಟ್ ಆ್ಯಪ್ ಸೇರಿದಂತೆ ಜಾಲತಾಣಗಳಲ್ಲಿ ಹರಡುತ್ತಿರುವ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಚಿವೆ ಸ್ಮತಿ ಇರಾನಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಇತರ ಹಲವರ ವಿರುದ್ಧ ದಿಲ್ಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.