ಸಮಗ್ರ ನ್ಯೂಸ್: ಸುಳ್ಯ ವಿಧಾನಸಭಾ ಕ್ಷೇತದಲ್ಲಿ 6 ಬಾರಿಯ ಶಾಸಕರಾಗಿ ಇದೀಗ ಸಚಿವರಾಗಿರುವ ಎಸ್ ಅಂಗಾರರು ಮುಂದಿನ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಿಲ್ಲ ಎಂಬ ಸುದ್ದಿಗಳು ಸ್ವಪಕ್ಷದಲ್ಲೇ ಕೇಳಿ ಬರುತ್ತಿದೆ. ಹಾಗಿದ್ದರೆ ಮುಂದೆ ಬಿಜೆಪಿಯಿಂದ ಸುಳ್ಯ ಕ್ಷೇತ್ರದಲ್ಲಿ ಸ್ಷರ್ದಿಸುವವರು ಯಾರು? ಎಂಬ ಕುತೂಹಲ ಮೂಡಿದೆ.
೧೯೯೪ರಿಂದ ಸುಳ್ಯ ಕ್ಷೇತ್ರದ ಶಾಸಕರಾಗಿರುವ ಅಂಗಾರರು ಜನಾನುರಾಗಿ ಹಾಗೂ ಅಜಾತ ಶತ್ರು ಎಂದೇ ಖ್ಯಾತರು. ಸರಳ ಸಜ್ಜನಿಕೆಯ ಅವರ ವ್ಯಕ್ತಿತ್ವ ಅಲ್ಲಿನ ಜನಸ್ತೋಮಕ್ಕೆ ಮೆಚ್ಚುಗೆಯಾದುದರಿಂದಲೇ ಅವರು ಹೀಗೆ ಸತತವಾಗಿ ಗೆಲುವಿನ ನಗೆ ಬೀರುತ್ತಿದ್ದಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ೧೯೯೦ರ ಬಳಿಕ ಮೊದಲ ಬಾರಿ ಶಾಸಕರಾದ ದ.ಕ ಜಿಲ್ಲೆಯ ಶಾಸಕರುಗಳ ಪೈಕಿ ಸತತ ಆರು ಬಾರಿ ಗೆದ್ದ ಉದಾಹರಣೆ ಇರುವುದು ಅಂಗಾರರದು ಮಾತ್ರ.
ಕಳೆದ ೫೦ ವರ್ಷದ (೧೯೭೨ ರಿಂದ) ರಾಜಕೀಯ ಇತಿಹಾಸ ನೋಡಿದರೇ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಗೆದ್ದ ಪಾರ್ಟಿಯೇ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತದೆ. ಈ ಎರಡು ಕ್ಷೇತ್ರಗಳ ರಾಜಕೀಯ ಟ್ರೆಂಡ್ ಬಹುತೇಕ ಒಂದೇ ರೀತಿ ಇರುವುದು ಅಂಕಿ ಅಂಶಗಳು ಸಾಬೀತು ಮಾಡುತ್ತಾದೆ. ಲೋಕಸಭಾ ಚುನಾವಣೆಯಲ್ಲೂ ಇದೇ ಟ್ರೆಂಡ್ ಜಾರಿಯಲ್ಲಿರುತ್ತಾದೆ. ಇದಕ್ಕೆ ಏಕೈಕ ಅಪವಾದ ಎಂದರೇ ೨೦೧೩ರ ಚುನಾವಣೆ. ಆ ಸಾಲಿನಲ್ಲಿ ಪುತ್ತೂರಿನಲ್ಲಿ ಕಾಂಗ್ರೇಸ್ ಗೆಲುವು ಸಾಧಿಸಿದರೂ , ಸುಳ್ಯದಲ್ಲಿ ಅಂಗಾರರನ್ನು ಕಾಂಗ್ರೇಸ್ಸಿಗೆ ಸೋಲಿಸಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಅಂಗಾರರ ವೈಯುಕ್ತಿಕ ವರ್ಚಸ್ಸು.
ಆದರೇ ೨೮ ವರ್ಷಗಳ ಸುದೀರ್ಘ ಶಾಸಕತ್ವದ ಅವಧಿಯ ಬಳಿಕ ಮೊದಲ ಬಾರಿಗೆ ಅವರ ವಿರುದ್ದ ಅಡಳಿತ ವಿರೋಧಿ ಅಲೆಯೊಂದು ಎದ್ದಿದೆ. ಕಳೆದ ಹಲವು ಬಾರಿ ಅದು ಸ್ಪೋಟ ಬಹಿರಂಗಗೊಂಡ ಉದಾಹರಣೆಯು ಇದೆ. ಈ ಬಾರಿ ಅವರು ಸಚಿವರೂ ಆಗಿರುವುದರಿಂದ ಅವರ ಬಗ್ಗೆ ಕ್ಷೇತ್ರದ ಜನತೆಗೆ ಅತೀವವಾದ ನಿರೀಕ್ಷೆಗಳಿವೆ. ಆ ನಿರೀಕ್ಷೆಗೆ ತಕ್ಕ ಕೆಲಸಗಳು ಸುಳ್ಯದಲ್ಲಿ ಆಗಿರುವುದು ಕಂಡು ಬರುವುದಿಲ್ಲ, ಇದರ ಜತೆಗೆ ಅಂಗಾರರು ಕೂಡ ಜನರ ನಡುವಿನ ಸಂಪರ್ಕವನ್ನು ಕಡಿಮೆ ಮಾಡಿದ್ದಾರೆ. ಕಾರ್ಯಕರ್ತರಿಗೆ ಹಾಗೂ ಜನರಿಗೆ ಸುಲಭದಲ್ಲಿ ಸಿಗುವುದಿಲ್ಲ. ಸಭೆ ಸಮಾರಂಭ ಕಾರ್ಯಕ್ರಮಗಳಲ್ಲಿ ಮೊದಲಿನಷ್ಟು ಭಾಗವಹಿಸುತ್ತಿಲ್ಲ. ಎನ್ನುವ ಆರೋಪಗಳು ಪಕ್ಷದ ಕಾರ್ಯಕರ್ತರ ವಲಯದಲ್ಲಿದೆ ಎನ್ನಲಾಗುತ್ತಿದೆ.
ಸುಳ್ಯ ಗ್ರಾಮೀಣ ಪ್ರದೇಶವಾಗಿದ್ದು, ಇದು ರಾಜ್ಯದ ಉಳಿದ ಅಭಿವೃದ್ಧಿ ಹೊಂದಿದ ಕ್ಷೇತ್ರಗಳಿಗೆ, ಅಥವಾ ಪಕ್ಕದ ಪುತ್ತೂರಿಗೆ ಹೋಲಿಸಿದರೇ ದೊಡ್ಡ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಸುಳ್ಯದ ಜೀವನಾಡಿಯಾಗಿರುವ, ಅರ್ಥಿಕತೆಯ ಮೂಲ ಸೆಲೆಯಾಗಿರುವ ಅಡಿಕೆ ಬೆಳೆಯಲ್ಲಿ ಕಾಣಿಸಿಕೊಂಡ ಹಳದಿ ರೋಗಕ್ಕೆ ಅಂಗಾರರ ಒಟ್ಟು ಶಾಸಕತ್ವದ ಅವಧಿಯಷ್ಟೆ ವಯಸ್ಸಾಗಿದೆ. ಹಾಗಿದ್ದು ಸುಮಾರು ೨೫ ವರ್ಷಗಳ ಕಾಲಾವಧಿಯಲ್ಲಿ ಆ ಸಮಸ್ಯೆಗೆ ಪರಿಹಾರ ಕೊಡಿಸುವಲ್ಲಿ, ಕಂಡುಕೊಳ್ಳುವಲ್ಲಿ, ಹುಡುಕುವಲ್ಲಿ ಶಾಸಕರ ಪ್ರಯತ್ನ ಗಮನಕ್ಕೆ ಬಂದದ್ದು ಕಮ್ಮಿ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಅಡಳಿತವಿದ್ದಾಗಲೂ ಅಡಳಿತ ಶಾಹಿಯ ಮೇಲೆ ಪ್ರಭಾವ ಭೀರಿ ಕೆಲಸ ಮಾಡಿಸುವಲ್ಲಿ ಅಂಗಾರರು ವಿಫಲರಾಗಿದ್ದಾರೆ ಎಂಬ ಆರೋಪಗಳು ತೊಂದರೆಗೆ ಒಳಗಾದ ರೈತರ ಮಧ್ಯೆ ಇದೆ.
ರಸ್ತೆ, ಸೇತುವೆ, ಶಾಲೆ, ಆರೋಗ್ಯ ಇತ್ಯಾದಿ ಮೂಲಭೂತ ಸೌಕರ್ಯದಲ್ಲಿ ಸುಳ್ಯ ಬಹಳಷ್ಟು ಹಿಂದಿದ್ದು, ಇದರ ಪೂರೈಸುವಲ್ಲಿಯೂ ಅಂಗಾರರು ಗಮನಾರ್ಹ ಪ್ರಗತಿ ಸಾಧಿಸಿಲ್ಲ. ರಸ್ತೆ, ಸೇತುವೆಗಾಗಿ ಕಾರ್ಯಕರ್ತರೇ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಕ್ಷೇತ್ರದಲ್ಲಿ ಒದಗಿ ಬಂದಿರುವುದು ಕಾರ್ಯಕರ್ತರ ಹಾಗೂ ಮತದಾರರ ಭ್ರಮನಿರಸನಕ್ಕೆ ಕಾರಣವಾಗಿದೆ. ಹೀಗಾಗಿ ಅವರನ್ನು ಬದಲಾಯಿಸಬೇಕು ಎಂಬ ಕೂಗು ಬಿಜೆಪಿಯ ತಳ ಮಟ್ಟದ ಕಾರ್ಯಕರ್ತರ ಮಧ್ಯೆ ಧ್ವನಿಸುತ್ತಿದ್ದು ಇದಕ್ಕೆ ತುಪ್ಪ ಸುರಿಯುವ ಕಾರ್ಯವನ್ನು ಬಿಜೆಪಿಯಲ್ಲಿರುವ ಅಂಗಾರರ ವಿರೋಧಿ ಬಣ ಮಾಡುತ್ತಿದೆ.
ಈ ಎಲ್ಲಾ ಗೊಂದಲದ ಸಂದರ್ಭ ಅಲ್ಲಿನ ಸಂಘದ ಮುಖಂಡರ ಸೂಚನೆಯ ಮೇರೆಗೆ ಅಂಗಾರರು ತನ್ನ ಅತ್ಯಾಪ್ತ ಬಳಗದಲ್ಲಿದ್ದ ವ್ಯಕ್ತಿಯೊಬ್ಬರನ್ನು ದೂರವಿರಿಸಿದ್ದಾರೆ. ಇದರಿಂದ ಅವರೀಗ ಅಂಗಾರರ ವಿರುದ್ದ ಮುನಿಸಿಕೊಂಡಿದ್ದು ಅತೃಪ್ತ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಆ ವಿರೋಧಿ ಬಣವು ಬಿಜೆಪಿಯ ಮತ್ತೊಬ್ಬ ಪರಿಶಿಷ್ಟ ಜಾತಿಯ ನಾಯಕನನ್ನು ಅಂಗಾರರ ವಿರುದ್ದ ಅಭ್ಯರ್ಥಿಯಾಗಿ ಬಿಂಬಿಸಲು ಯತ್ನಿಸುತ್ತಿದೆ.
ತಾಲೂಕು ಪಂಚಾಯತಿನಲ್ಲಿ ಆಯಕಟ್ಟಿನ ಸ್ಥಾನವನ್ನು ಅಲಂಕರಿಸಿದ್ದ ಹಾಗು ಪಕ್ಷದಲ್ಲಿ ಈಗಲೂ ಪ್ರಮುಖ ಹುದ್ದೆಯಲ್ಲಿರುವ ಅವರ ಬಯೋಡೆಟಾ ತಯಾರಿಸಿರುವ ಈ ತಂಡ ಅವರ ಸಾಧನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಪ್ರಚಾರದಲ್ಲಿ ತೊಡಗಿಸಿದೆ. ಅತ್ಯುತ್ತಮ ಶೈಕ್ಷಣಿಕ ಹಿನ್ನಲೆ ಹಾಗೂ ಅಡಳಿತ ಅನುಭವ ಇರುವ ಮುಖಂಡ ಅಂಗಾರರಿಗಿಂತ ಬೆಟರ್ ಕ್ಯಾಂಡಿಡೇಟ್ ಎಂದು ಬಿಂಬಿಸುತ್ತಿದೆ.
ಭಿನ್ನಮತೀಯ ತಂಡದ ಪ್ರಯತ್ನಕ್ಕೆ ಸಂಘದ ಹಿರಿಯರೊಬ್ಬರು ಕೈ ಜೋಡಿಸಿರುವುದು ಗೊತ್ತಾಗಿದೆ. ಅವರಿಗೆ ಅಂಗಾರರ ಬಗ್ಗೆ ಪ್ರೀತಿ ಇದ್ದರೂ, ಅಂಗಾರರು ಈ ಬಾರಿ ಗೆಲ್ಲುವುದು ಕಷ್ಟ ಎಂಬ ವರದಿ ಅವರ ಕೈ ಸೇರಿದ ಬಳಿಕ, ಕ್ಷೇತ್ರದಲ್ಲಿ ಪಕ್ಷದ ಹಿಡಿತ ಕೊನೆಯಾಗಬಾರದು ಎಂಬ ಹಿನ್ನಲೆಯಲ್ಲಿ ಅವರು ಹೊಸ ನಾಯಕನ ಪ್ರಚಾರದದ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಬಿಜೆಪಿಯ ಕೇಂದ್ರ ಹೈಕಮಾಂಡ್ ಎರಡು ಪ್ರತ್ಯೇಕ ಖಾಸಗಿ ತಂಡಗಳ ಮೂಲಕ ರಾಜ್ಯವ್ಯಾಪಿ ಚುನಾವಣಾ ಸಮೀಕ್ಷೆ ನಡೆಸಿದೆ. ಅದರಲ್ಲಿ ಸುಳ್ಯ ಬಿಜೆಪಿಯ ಮಟ್ಟಿಗೆ ಡೆಂಜರ್ ಝೋನ್ ನಲ್ಲಿ ಕಾಣಿಸಿದೆ. ಸುಳ್ಯದಲ್ಲಿ ಪಕ್ಷ ತಳಮಟ್ಟದಲ್ಲಿ ಗಟ್ಟಿಯಾಗಿದ್ದರೂ ಅಂಗಾರರ ವಿರುದ್ದವಾಗಿರುವ ಆಡಳಿತ ವಿರೋಧಿ ಅಲೆ ದೊಡ್ಡ ಮಟ್ಟದಲ್ಲಿ ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡಬಹುದು ಎಂದು ಅದು ತಿಳಿಸಿರುವುದಾಗಿ ವರದಿಯಾಗಿದೆ. ಹೀಗಾಗಿಯೇ ಸುಳ್ಯದ ರಾಜಕೀಯ ಪಲ್ಲಟಗಳ ಬಗ್ಗೆ ಹಾಗೂ ಬಿಜೆಪಿಯ ಕಾರ್ಯಶೈಲಿಯ ಬಗ್ಗೆ ಹದ್ದಿನ ಕಟ್ಟಿರುವ ಸಂಘದ ಮುಖಂಡ ಅಭ್ಯರ್ಥಿ ಬದಲಾವಣೆಗೆ ಮನ ಮಾಡಿದ್ದು, ಅವರ ನಿರ್ಧಾರ ಸುಳ್ಯದಲ್ಲಿ ಪಕ್ಷದ ಮಟ್ಟಿಗೆ ವೇದವಾಕ್ಯ ಎಂದು ಹೇಳಲಾಗುತ್ತಿದೆ.