ಸಮಗ್ರ ನ್ಯೂಸ್: ಇಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ, ಫಾರ್ಮಸಿ ಮುಂತಾದ ವೃತ್ತಿಪರ ಕೋರ್ಸುಗಳಿಗೆ ಇದೇ 16 ಮತ್ತು 17ರಂದು ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಮತ್ತು 18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಈ ಬಾರಿ ಒಟ್ಟು 2,16,525 ವಿದ್ಯಾರ್ಥಿಗಳು ಸಿಇಟಿ ಬರೆಯಲಿದ್ದಾರೆ.
`16ರಂದು ಬೆಳಿಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ ಪರೀಕ್ಷೆಗಳು ನಡೆಯಲಿವೆ. 17ರಂದು ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ಜರುಗಲಿದೆ’.
18ರ ಬೆಳಿಗ್ಗೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಬೆಂಗಳೂರು, ಬೀದರ್, ಬೆಳಗಾವಿ, ವಿಜಯಪುರ, ಬಳ್ಳಾರಿ ಮತ್ತು ಮಂಗಳೂರುಗಳಲ್ಲಿ ಕನ್ನಡ ಭಾಷಾಪರೀಕ್ಷೆ ನಡೆಯಲಿದ್ದು, ಈ ಸಲ 1,708 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ.
ಈ ಬಾರಿ ಒಟ್ಟು 486 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಪೈಕಿ 87 ಕೇಂದ್ರಗಳು ಬೆಂಗಳೂರಿನಲ್ಲಿವೆ. ಯಾವುದೇ ಅಕ್ರಮಕ್ಕೆ ಅವಕಾಶ ನೀಡಬಾರದೆಂಬ ಉದ್ದೇಶದಿಂದ ಈ ಬಾರಿ ಪ್ರತಿಯೊಂದು ಕೇಂದ್ರದ ಪರೀಕ್ಷಾ ಪ್ರಕ್ರಿಯೆಯನ್ನೂ ಸಮಗ್ರವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಜತೆಗೆ ಪ್ರಶ್ನೆಪತ್ರಿಕೆ ಪೂರೈಕೆ ಇತ್ಯಾದಿಗಳನ್ನು ಹದ್ದಿನ ಕಣ್ಣಿನ ಪಹರೆಯಲ್ಲಿ ನಡೆಸಲಾಗುವುದು.
ಈ ಸಲದ ಸಿಇಟಿ ಪರೀಕ್ಷೆಯಲ್ಲಿ ಪ್ರಶ್ನೆ ಮತ್ತು ಉತ್ತರಗಳನ್ನು ಇಂಗ್ಲಿಷ್ ಹಾಗೂ ಕನ್ನಡ ಎರಡರಲ್ಲೂ ಕೊಡಲಾಗುವುದು.