ಸಮಗ್ರ ನ್ಯೂಸ್: ಕೋಮುವಾದಿ ಪಕ್ಷವನ್ನು ಸೋಲಿಸುವ ಬದ್ಧತೆ ಇದ್ದರೆ ಜೆಡಿಎಸ್ ಅಭ್ಯರ್ಥಿ ನಿವೃತ್ತಗೊಳಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತಿಬಾರಿ ಕಾಂಗ್ರೆಸ್ ಪಕ್ಷವೇ ಏಕೆ ಬೆಂಬಲ ನೀಡಬೇಕು. ಜೆಡಿಎಸ್‍ನವರು ಕಣಕ್ಕಿಳಿಸಲಾಗಿರುವ ಅಲ್ಪಸಂಖ್ಯಾತ ಅಭ್ಯರ್ಥಿಗೆ ಬೆಂಬಲ ನೀಡಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಏಕೆ ಸಹಕರಿಸಬಾರದು ಎಂದು ಪ್ರಶ್ನಿಸಿದರು.
ಈ ಮೊದಲು ಕಾಂಗ್ರೆಸ್ ಬೆಂಬಲದಿಂದ ದೇವೇಗೌಡರು ಪ್ರಧಾನಿಯಾಗಿದ್ದರು. ಜೆಡಿಎಸ್‍ನಲ್ಲಿ 37 ಶಾಸಕರಿದ್ದರು. 80 ಶಾಸಕರಿದ್ದ ಕಾಂಗ್ರೆಸ್ ಪಕ್ಷ ಬೇಷರತ್ ಬೆಂಬಲ ನೀಡಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿತ್ತು. ಕಳೆದ ಬಾರಿ ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಹಾಕದೆ ದೇವೇಗೌಡರ ಗೆಲುವಿಗೆ ಸಹಕಾರ ನೀಡಿದೆ. ಅದೇ ರೀತಿ ಜೆಡಿಎಸ್‍ನವರು ಈಗ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲಿ ಎಂದರು. ಇನ್ನೂ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ನಂತರ ಒಂದು ದಿನ ತಡವಾಗಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಇದರ ಅರ್ಥವೇನು? ಬಿಜೆಪಿಯನ್ನು ಗೆಲ್ಲಿಸಲು ಸಹಕರಿಸುತ್ತಿದ್ದಾರೆ ಎಂದಲ್ಲವೆ? ಎಂದು ಹೇಳಿದರು.