ಸಮಗ್ರ ನ್ಯೂಸ್: ಹೈದರಾಬಾದ್ ನಲ್ಲಿ ನಡೆದ ಗ್ಯಾಂಗ್ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಪ್ರಕಾರ, ಅತ್ಯಾಚಾರ ನಡೆದಿದ್ದ ಇನ್ನೋವಾ ಕಾರು ಸರ್ಕಾರಿ ವಾಹನ ಎಂಬುದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ನಾಲ್ವರು ಅಪ್ರಾಪ್ತರು ಸೇರಿದಂತೆ ಆರು ಆರೋಪಿಗಳನ್ನು ಎಫ್ಐಆರ್ನಲ್ಲಿ ಸೇರಿಸಲಾಗಿದ್ದು, ಎಲ್ಲ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಮೇ.28ರಂದು 17 ವರ್ಷದ ಅಪ್ರಾಪ್ತೆ ಪಾರ್ಟಿಗೆಂದು ಪಬ್‌ಗೆ ಹೋಗಿದ್ದಳು. ಈ ವೇಳೆ ಹುಡುಗನೊಬ್ಬನನ್ನು ಆಕೆ ಭೇಟಿಯಾಗಿದ್ದಳು. ಪಾರ್ಟಿಯ ಬಳಿಕ ಪರಿಚಿತ ಹುಡುಗ ಮತ್ತು ಆತನ ಸ್ನೇಹಿತರೊಂದಿಗೆ ಕ್ಲಬ್ನಿಂದ ಹೊರಬಂದಿದ್ದಳು. ಪಾರ್ಟಿ ಮುಗಿದ ಬಳಿಕ ಮನೆಗೆ ಡ್ರಾಪ್ ಮಾಡುತ್ತೇನೆಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಅವರೊಂದಿಗೆ ಹುಡುಗಿ ಮರ್ಸಿಡೆಸ್ ಬೆಂಜ್ ಕಾರಿನಲ್ಲಿ ಹೋಗಿದ್ದಳು.
ಕಾರಿನಲ್ಲಿ ಹೋಗುವಾಗ ಹತ್ತಿರದ ಕೆಫೆ ಬಳಿ ಮೇ.28ರಂದು ಸಂಜೆ 6.30ಕ್ಕೆ ಇನ್ನೋವಾ ಕಾರಿಗೆ ಎಲ್ಲರು ಸ್ಥಳಾಂತರವಾಗಿದ್ದಾರೆ. ಬಳಿಕ ಆಕೆಯನ್ನು ರಸ್ತೆ ನಂಬರ್ 44ರಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲೇ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ರಾತ್ರಿ 7.30ರ ಸುಮಾರಿಗೆ ಆಕೆಯನ್ನು ಮತ್ತೆ ಪಬ್‌ಗೆ ಬಿಟ್ಟಿದ್ದಾರೆ.
ಘಟನೆ ನಡೆದ ಪ್ರದೇಶವು ಹೈದರಾಬಾದ್‌ನ ಐಷಾರಾಮಿ ಪ್ರದೇಶವಾಗಿದ್ದು, ಅಲ್ಲಿ ಅನೇಕ ಉನ್ನತ ರಾಜಕಾರಣಿಗಳು, ಉದ್ಯಮಿಗಳು, ನಟರು ಮತ್ತು ಇತರ ಪ್ರಭಾವಿ ವ್ಯಕ್ತಿಗಳು ವಾಸಿಸುತ್ತಿದ್ದಾರೆ.
ಆರೋಪಿಗಳಲ್ಲಿ ಒಬ್ಬನಾದ ಸಾದುದ್ದೀನ್ ಕೃತ್ಯವು ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ನಡೆಯಿತು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದನು. ಇದರ ಆಧಾರದ ಮೇಲೆ ಕಾರನ್ನು ಫಾರ್ಮ್ಹೌಸ್ನಲ್ಲಿ ವಶಕ್ಕೆ ಪಡೆಯಲಾಯಿತು. ಅಂದಹಾಗೆ ಫಾರ್ಮ್ಹೌಸ್ ರಾಜಕೀಯ ಕುಟುಂಬದ ಜತೆ ಸಂಪರ್ಕ ಹೊಂದಿರುವ ಮಹಿಳೆ ಒಡೆತನದಲ್ಲಿದೆ.
ವಶಕ್ಕೆ ಪಡೆದ ಇನ್ನೋವಾ ಕಾರನ್ನು ಸರ್ಕಾರಿ ವಾಹನ ಎಂದು ಗುರುತಿಸಲಾಗಿದೆ ಮತ್ತು ಅದನ್ನು ವಕ್ಫ್ ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ಬಳಸುತ್ತಿದ್ದರು. ಅಪರಾಧದ ಸಮಯದಲ್ಲಿ ಮರ್ಸಿಡಿಸ್ ಮತ್ತು ಇನ್ನೋವಾ ಎರಡನ್ನೂ ಅಪ್ರಾಪ್ತ ವಯಸ್ಕರು ಓಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮರ್ಸಿದೆಸ್ ಕಾರು ತೆಲಂಗಾಣ ಶಾಸಕರೊಬ್ಬರಿಗೆ ಸೇರಿದ್ದು ಎನ್ನಲಾಗಿದೆ.