ಸಮಗ್ರ ನ್ಯೂಸ್: ರಾಜ್ಯಸಭೆ ಚುನಾವಣೆಗಾಗಿ ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಆದರೆ ಯಾವುದೇ ಪಕ್ಷದ ಅಭ್ಯರ್ಥಿಗಳು ಇಂದು ನಾಮಪತ್ರ ಹಿಂಪಡೆಯದ ಕಾರಣ, ಅಂತಿಮವಾಗಿ ಕಣದಲ್ಲಿ 6 ಅಭ್ಯರ್ಥಿಗಳು ಇದ್ದಾರೆ.
ಜೂನ್ 10ರಂದು ನಡೆಯಲಿರುವಂತ ರಾಜ್ಯಸಭೆಯ ಚುನಾವಣೆಗೆ ಇಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆಯೊಂದಿಗೆ, ಕಾಂಗ್ರೆಸ್ ಪಕ್ಷದ 2ನೇ ಅಭ್ಯರ್ಥಿಯು ನಾಮಪತ್ರ ವಾಪಾಸ್ ಪಡೆಯಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕ ಸಿದ್ಧರಾಮಯ್ಯ ಮಾತ್ರ ನಾವು ಯಾವುದೇ ಕಾರಣಕ್ಕೂ ನಾಮಪತ್ರ ವಾಪಾಸ್ ಪಡೆಯೋದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದರು. ಹೀಗಾಗಿ ಜೆಡಿಎಸ್ ನಾಯಕರು ನಡೆಸಿದಂತ ಅಂತಿಮ ಹಂತದ ಕಸರತ್ತು ವರ್ಕೌಟ್ ಆಗಿಲ್ಲ.
ಇದೀಗ ನಾಮಪತ್ರ ಹಿಂಪಡೆಯುವಂತ ಅವಧಿ ಮುಕ್ತಾಯಗೊಂಡಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವಂತ ಚುನಾವಣಾ ಕಣದಲ್ಲಿ ಬಿಜೆಪಿಯ ಮೂವರು, ಕಾಂಗ್ರೆಸ್ ನ ಇಬ್ಬರು ಹಾಗೂ ಜೆಡಿಎಸ್ ಪಕ್ಷದ ಒಬ್ಬರು ಸೇರಿದಂತೆ 6 ಮಂದಿ ಉಳಿದಿದ್ದಾರೆ. ಬಿಜೆಪಿ ಪಕ್ಷದಿಂದ ನಟ ಜಗ್ಗೇಶ್, ನಿರ್ಮಲಾ ಸೀತಾರಾಮನ್ ಹಾಗೂ ಲೇಹರ್ ಸಿಂಗ್ ಕಣದಲ್ಲಿದ್ದರೆ, ಕಾಂಗ್ರೆಸ್ ನಿಂದ ಜೈರಾಂ ರಮೇಶ್ ಹಾಗೂ ಮನ್ಸೂರ್ ಆಲಿ ಖಾನ್ ನಿಂತಿದ್ದಾರೆ. ಜೆಡಿಎಸ್ ಪಕ್ಷದಿಂದ ಕುಪೇಂದ್ರ ರೆಡ್ಡಿ ಕಣದಲ್ಲಿ ಇದ್ದಾರೆ. ಬಿಜೆಪಿಯ ಮೂರನೇ ಅಭ್ಯರ್ಥಿ, ಕಾಂಗ್ರೆಸ್ ನ ಎರಡನೇ ಅಭ್ಯರ್ಥಿ ಹಾಗೂ ಜೆಡಿಎಸ್ ಪಕ್ಷದ ಓರ್ವ ಅಭ್ಯರ್ಥಿ ಗೆಲ್ಲೋದಕ್ಕೆ ಮತ್ತೊಂದು ಪಕ್ಷದ ಬೆಂಬಲಿತ ಮತಗಳ ಅಗತ್ಯವಿದೆ. ಹಾಗಾದರೆ ಯಾವ ಪಕ್ಷದ ನಾಯಕರು, ಯಾರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ಜೂನ್ 10ರಂದು ತಿಳಿಯಲಿದೆ.