ಸಮಗ್ರ ನ್ಯೂಸ್: ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು, ಸಿಬ್ಬಂದಿ, ಮೂಡುಬಿದಿರೆ ಪ್ರಾದೇಶಿಕ ವಲಯದ ಸಿಬ್ಬಂದಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ ಕೆಂಚನಕೆರೆ ಎಂಬಲ್ಲಿ ಈಚರ್ ವಾಹನದಲ್ಲಿ ಬೈಹುಲ್ಲು ಹೊದೆಸಿ ಸಾಗಿಸಲಾಗುತ್ತಿದ್ದ 8308 ಕೆಜಿ ತೂಕದ ರೂ.4.15 ಕೋಟಿ ಮೌಲ್ಯದ , ರಕ್ತಚಂದನ ಮರದ 316 ದಿಮ್ಮಿಗಳನ್ನು ವಶಕ್ಕೆ ತೆಗೆದುಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ.
ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆರೋಪಿಗಳು ಆಂಧ್ರಪ್ರದೇಶದ ನೆಲ್ಲೂರಿನ ಅಲಾಡಿ ರಾಜೇಶ ರೆಡ್ಡಿ, ಕೇರಳ ಪಾಲಕ್ಕಾಡ್ ನ ಸುಭಾಸ್, ತಮಿಳುನಾಡಿನ ತಿರುವಲ್ಲೂರಿನ ಪಾಲರಾಜ್,ಪಾಲಕ್ಕಾಡ್ ನ ಶಾಮೀರ್ ಎಸ್., ಪಾಲಕ್ಕಾಡ್ ನ ಕುಂಞಿ ಮಹಮ್ಮದ್, ಕೊಯಮತ್ತೂರು ನ ಅನಿಲ್ ಕುಮಾರ್, ತಮಿಳುನಾಡು ತಿರುವೆಳ್ಳೂರ್ ನ ದಿನೇಶ್ ಕುಮಾರ್ ಕೆ. ಎನ್ನುವವರಾಗಿದ್ದಾರೆ. ಓರ್ವ ಪರಾರಿಯಾಗಿದ್ದಾನೆ. ಬೆಂಗಾವಲಾಗಿದ್ದ ಮಹೇಂದ್ರ ಮೊರೆಜೋ ವಾಹನವನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಮಾರ್ಗದರ್ಶನ ದಲ್ಲಿಮಂಗಳೂರು ಅರಣ್ಯ ಸಂಚಾರಿ ದಳ ವಲಯ ಅರಣ್ಯ ಅಧಿಕಾರಿಗಳಾದ ಚಿದಾನಂದಪ್ಪ, ಸಂಪತ್ ಪಟೇಲ್, ಉಪ ವಲಯ ಅರಣ್ಯಾಧಿಕಾರಿಗಳಾದ ಕರುಣಾಕರ ಜೆ.ಆಚಾರ್ಯ, ಪ್ರದೀಪ್ ಬಿ.ಎಸ್.,ಕಾಂತರಾಜ್ ಬಿ.ಎ. , ವಿಕಾಸ್ ಶೆಟ್ಟಿ ಕೆ. , ಸಂತೋಷ್, ರಾಕೇಶ್, ಕೃಷ್ಣ ಪ್ಪ ಜಿ., ನವೀನ್ ಕುಮಾರ್, ಬಂಟ್ವಾಳ ಉಪವಲಯಾರಣ್ಯಾಧಿಕಾರಿ ಪ್ರೀತಮ್, ಅರಣ್ಯ ರಕ್ಷಕ ಜಿತೇಶ್ ಪುತ್ರನ್, ಮೂಡುಬಿದಿರೆ ಪ್ರಾದೇಶಿಕ ವಲಯದ ವಲಯ ಅರಣ್ಯ ಅಧಿಕಾರಿ ಹೇಮಗಿರಿ ಅಂಗಡಿ, ಉಪವಲಯ ಅರಣ್ಯಾಧಿಕಾರಿಗಳಾದ ಅಶ್ವಿತ್ ಗಟ್ಟಿ, ಮಂಜುನಾಥ ಗಾಣಿಗ ಕಾರ್ಯಾಚರಣೆ ಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.